ಶಿವಮೊಗ್ಗ: ನಿವೃತ್ತ ವಾರ್ತಾಧಿಕಾರಿ ರಾಮೇಗೌಡ ಅವರು ವಿಧಿವಶರಾಗಿದ್ದಾರೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು.
ರಾಮೇಗೌಡ ಅವರು ಶಿವಮೊಗ್ಗ, ಕೊಡಗು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಸರಳ ಸಜ್ಜನರಾಗಿದ್ದು, ಸ್ನೇಹಶೀಲರಾಗಿದ್ದರು. ಶಿವಮೊಗ್ಗದ ಬಹುತೇಕ ಪತ್ರಕರ್ತರು ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಈಗಿನಂತೆ ಆಗ ಸಾಮಾಜಿಕ ಜಾಲತಾಣಗಳು ಇರಲಿಲ್ಲವಾಗಿದ್ದರೂ ಕೂಡ ಸುದ್ದಿಗಳನ್ನು ನಿಖರವಾಗಿ, ಸಮಯಕ್ಕೆ ಸರಿಯಾಗಿ ಪತ್ರಿಕೆಗಳಿಗೆ ತಲುಪಿಸುವ ಬಹುದೊಡ್ಡ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದು, ಹಿರಿಯ-ಕಿರಿಯರೆನ್ನದೇ ಎಲ್ಲ ವಯೋಮಾನದ ಪತ್ರಕರ್ತರನ್ನೂ ಪ್ರೀತಿಯಿಂದ ಕಾಣುತ್ತಿದ್ದರು.
ಅವರ ನಿಧನಕ್ಕೆ ಶಿವಮೊಗ್ಗದ ಪತ್ರಕರ್ತರ ಸಂಘಗಳು ಮತ್ತು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.


ಇಂದು ಅವರ ಹುಟ್ಟಿದ ಊರಾದ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಂತಾಪ: ನಾನೋರ್ವ ಪತ್ರಕರ್ತನಾಗಿ ಸೇವೆ ಸಲ್ಲಿಸಲು ಸಾಕಷ್ಟು ಗಣ್ಯರು ಪ್ರೇರಕರಾಗಿದ್ದಾರೆ. ಅದರೊಳಗೆ ಹಿಂದೆ ಶಿವಮೊಗ್ಗದಲ್ಲಿ ವಾರ್ತಾಧಿಕಾರಿಯಾಗಿದ್ದ ರಾಮೇಗೌಡರು ಸಹ ಎಂದು ಹೇಳಲು ಇಷ್ಟಪಡುತ್ತೇನೆ. ಅವರು ಶಿವಮೊಗ್ಗದಲ್ಲಿ ಇದ್ದ ಸುಮಾರು ಆರರಿಂದ ಏಳುವರುಷದ ಅವಧಿಯಲ್ಲಿ ಅವರೇ ನಮ್ಮ ಬರಹಕ್ಕೊಂದು ಸ್ಪೂರ್ತಿ ಆಗಿದ್ದರು. ಸದಾ ಹೊಸದನ್ನು ಹುಡುಕಿ ಬರೆಯುತ್ತಿದ್ದ ರಾಮೇಗೌಡರು ನನ್ನನ್ನೂ ಸೇರಿದಂತೆ ಅಂದು ಬರಹ ಲೋಕದಲ್ಲಿ ಮುಳುಗಿದ್ದ ಹತ್ತಾರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು.

ಅತ್ಯಂತ ಪ್ರೀತಿಯಿಂದ ಸ್ವಾಮೀ ಎಂದು ಕರೆಯುತ್ತಿದ್ದ ರಾಮೇಗೌಡರಿದ್ದ ಅವಧಿಯಲ್ಲಿ ನಮಗೆ ವಾರ್ತಾಇಲಾಖೆ ದಿನನಿತ್ಯದ ಒಂದು ಬೇಟಿಯ ಸ್ಥಳವಾಗಿತ್ತು. ಮೊಬೈಲ್, ಕಂಪ್ಯೂಟರ್ ಬಳಕೆ ಅತ್ಯಂತ ಕಡಿಮೆ ಇದ್ದ ಆ ಅವಧಿಯಲ್ಲಿ ಅಲ್ಲಿಗೆ ಹೋದಾಗ ವರು ಬರೆಯುತ್ತಾ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಲಾಖೆಯಲ್ಲಿ ಬೆರಳೆಣಿಯಷ್ಟು ಸಿಬ್ಬಂದಿ ಇದ್ದರೂ ಅತ್ಯಂತ ಪ್ರೀತಿಯಿಂದ ನಗುನಗುತ್ತಾ ಸ್ವಾಗತಿಸುತ್ತಿದ್ದ ಪರಿ ಎಂದೆಂದಿಗೂ ಮಾದರಿಯಾಗಿತ್ತು. ಮಾಮೂಲಿ ಎಂಬಂತೆ ಹೋದಾಗಲೆಲ್ಲಾ ಚಹಾ ಕುಡಿದು, ಹರಟೆ ಹೊಡೆದು, ಹೊಸತನದ ಬರಹಕ್ಕೊಂದು ಎಳೆ ರೂಪಿಸಿಕೊಂಡು ಬರುತ್ತಿದ್ದೆವು.

ಶಿವಮೊಗ್ಗದಿಂದ ರಾಮೇಗೌಡರು ಹಾಸನಕ್ಕೆ ವರ್ಗಾವಣೆಯಾದಾಗ ಇಲ್ಲಿಯೇ ಕುಳಿತು ಆ ಜಿಲ್ಲೆಯ ಇತಿಹಾಸ, ಬರೆಯಬಹುದಾದ ಸುದ್ದಿಗಳ ಬಗ್ಗೆ ಪೀಠಿಕೆ ಸಿದ್ದಪಡಿಸಿಕೊಂಡಿದ್ದ ರಾಮೇಗೌಡರು ಇಂದಿನವರೆಗೂ ಶಿವಮೊಗ್ಗದ ನಮ್ಮ ಸಂಪರ್ಕ ಹಾಗೂ ಬಾಂದವ್ಯವನ್ನು ಮರೆತಿರಲಿಲ್ಲ.

ರಾಮೇಗೌಡರ ನಿಧನದ ಸುದ್ದಿ ತಿಳಿದು ನೋವಾಯ್ತು. ಗುರುವಿನಂತೆ ಗುರುತಿಸಿಕೊಂಡಿದ್ದ ಗೌಡರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಗಜೇಂದ್ರ ಸ್ವಾಮಿ, ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

error: Content is protected !!