ಶಿವಮೊಗ್ಗ, ಸೆ.09:
ಪ್ರಸಕ್ತ ವರುಷದ ಭೀಕರ ಮಳೆಯಿಂದ ಮೆಕ್ಕೆಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದ್ದಕ್ಕೆ ಹಾಗೂ ಸಾಲದ ಬಾಧೆಗೆ ಬೇಸತ್ತು ಶಿವಮೊಗ್ಗ ಸಮೀಪದ ತೀರ್ಥಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಲವತ್ತಾರು ವರುಷ ವಯಸ್ಸಿನ ತೀರ್ಥಯ್ಯ ಅವರ ತಂದೆ ಸಹ ಸುಮಾರು ಐದು ವರುಷದ ಹಿಂದೆ ಬೆಳೆ ಹಾನಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ತಂದೆಯ ಹಾದಿಯನ್ನೆ ಮಗ ಹಿಡಿದಿರುವುದು ದುರಂತ.
ಪ್ರಸಕ್ತ ತೀರ್ಥಯ್ಯ ಅವರ ತಾಯಿ ಹೆಸರಿನಲ್ಲಿ 2.18 ಎಕರೆ ಸ್ವಂತ ಭೂಮಿ ಹಾಗೂ 1 ಎಕರೆ ಬಗರ್ ಹುಕುಂ ಭೂಮಿ ಇದ್ದು, ಇಲ್ಲಿ ಹಾಕಿದ್ದ ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿತ್ತು. ಇದಕ್ಕಾಗಿ ತೀರ್ಥಯ್ಯ ಬ್ಯಾಂಕ್ ಸೇರಿದಂತೆ ಕೈಗಡವಾಗಿ ಸುಮಾರು ಮೂರು ಲಕ್ಷರೂ ಸಾಲ ಮಾಡಿದ್ದರೆನ್ನಲಾಗಿದೆ. ಇಂದು ಸಂಜೆ ನೇಣಿಗೆ ಶರಣಾಗಿರುವ ಈ ರೈತ ಪತ್ನಿ, ಅವರ ತಾಯಿ ಹಾಗೂ ಇಬ್ಬರು ಪುಟ್ಡ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.