ಬೆಂಗಳೂರು,ಸೆ.07:

ಶಿಕ್ಷಕರೇ, ಇನ್ಮುಂದೆ ನೀವು ಶಾಲೆಯಲ್ಲಿ ಅದೂ ಶಾಲಾ ಅವಧಿಯಲ್ಲಿ ಇರಲೇಬೇಕು. ತಡವಾಗಿ ಬರುವಂತಿಲ್ಲ. ಬೇಗ ಹೋಗುವಂತೆಯೂ ಇಲ್ಲ. ಹಾಗೇನಾದರೂ ಮಾಡಿದರೆ, ನಿಮ್ಮ ಸಿಎಲ್ ಎಂಟ್ರಿ ಆಗುತ್ತೆ. ಹೇಗೆ ಗೊತ್ತಾ…?

ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದೆ ಕಳ್ಳಾಟವಾಡುವ ಶಿಕ್ಷಕರಿಗೆ ಬಿಸಿ ಮುಟ್ಟಿಸಿರುವ ಶಿಕ್ಷಣ ಇಲಾಖೆ, ಶಾಲೆ ಆರಂಭದ ಸಮಯಕ್ಕಿಂತ 15 ನಿಮಿಷ ಬೇಗ ಬರಬೇಕು ಮತ್ತು ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾಗಿ ಹಾಕುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌. ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಶಿಕ್ಷಕರ ಅಶಿಸ್ತಿನಿಂದ ಮಕ್ಕಳ ಕಲಿಕಾ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಕಚೇರಿ ಸಿಬ್ಬಂದಿ ವರ್ಗ ನಿಗದಿತ ಅವಧಿಗಿಂತ ಕನಿಷ್ಠ 15 ನಿಮಿಷ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.


ಇನ್ನು ರಜೆ ಮೇಲೆ ತೆರಳುವಾಗ ಸಂಬಂಧಪಟ್ಟ ಮೇಲಧಿಕಾರಿಗಳಿಂದ ಪೂರ್ವಾನುಮತಿ ಮಂಜೂರು ಪಡೆದು ತೆರಳಬೇಕು. ವೇತನ ಬಟವಾಡೆ ಅಧಿಕಾರಿಗಳು ತಮ್ಮ ಅಧೀನ ಕಚೇರಿ ಮತ್ತು ಶಾಲೆಗಳ ಬಯೋಮೆಟ್ರಿಕ್‌ ಹಾಜರಾತಿಯನ್ನು ಚೆಕ್‌-ಇನ್‌ ಮತ್ತು ಚೆಕ್‌-ಔಟ್‌ ಹಾರ್ಡ್‌/ಸಾಫ್ಟ್ ದಾಖಲೆಗಳನ್ನು ಪ್ರತಿ ತಿಂಗಳು 25ನೇ ತಾರೀಖೀನೊಳಗೆ ಪಡೆದು ಅದಕ್ಕೆ ಅನುಗುಣವಾಗಿ ವೇತನ ಪಾವತಿಸಲು ತಿಳಿಸಿದೆ.
ಬಯೋಮೆಟ್ರಿಕ್‌ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದೆ.

ಶಿಕ್ಷಣಸಚಿವ ಬಿ.ಸಿ. ನಾಗೇಶ್‌ ಅವರು ಇತ್ತೀಚೆಗೆ ಮಂಡ್ಯಜಿಲ್ಲೆಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಕ್ಷಕರು ಅರ್ಧ ಗಂಟೆ ತಡವಾಗಿ ಹಾಜರಾಗಿದ್ದು, ಶಿಕ್ಷಕರಿಗಾಗಿ ಮಕ್ಕಳು ಕಾಯುತ್ತಿದ್ದ ಘಟನೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಆಯುಕ್ತ ಡಾ.ಆರ್‌. ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!