ಭದ್ರಾವತಿ,ಸೆ.03:
ಮಾಜಿ ಶಾಸಕರಾದ ಎಂ.ಜೆ. ಅಪ್ಪಾಜಿ ಗೌಡರು ನಿನ್ನೆ ರಾತ್ರಿ ನಿಧನಹೊಂದಿದರು. ಅವರ ಹಠಾತ್ ನಿಧನದ ಸುದ್ದಿ ಮಿಂಚಿನಂತೆ ಎಲ್ಲೆಡೆ ದಿಗ್ಬ್ರಮೆ ಮೂಡಿಸಿದೆ. ಅವರ ನಿವಾಸದ ಮುಂದೆ ರಾತ್ರೋ ರಾತ್ರಿ ಸಾವಿರಾರು ಮಂದಿ ಸೇರಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದ ಅಪ್ಪಾಜಿ ಗೌಡರ ಪಾರ್ಥಿವ ಶರೀರವನ್ನು ರಾತ್ರಿ ಸುಮಾರು 1.30ರವೇಳೆಗೆ ಅವರ ನಿವಾಸಕ್ಕೆ ತರಲಾಯಿತು. ಆ ವೇಳೆಗಾಗಲೇ ಸಾವಿರಾರು ಮಂದಿ ಜಮಾಯಿಸಿದ್ದರು.
ನಿನ್ನೆ ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಅಪ್ಪಾಜಿ ಗೌಡರ ನಿಧನದ ಸುದ್ದಿ ತಿಳಿದು ಸುರಿಯುತ್ತಿದ್ದ ಮಳೆಯನ್ನೂ ಸಹ ಲೆಕ್ಕಿಸದೇ ಗ್ರಾಮೀಣ ಭಾಗದಿಂದಲೂ ಸಹ ಸಾವಿರಾರು ಮಂದಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಧಾವಿಸಿ, ಅಂತಿಮ ದರ್ಶನ ಪಡೆದರು.
ಮಕ್ಕಳೂ ಸೇರಿದಂತೆ ಯುವಕ ಯುವತಿಯರು ಸೇರಿದಂತೆ ವಯೋವೃದ್ಧರೂ ಸಹ ಸರಿ ರಾತ್ರಿಯೇ ಧಾವಿಸಿ, ಅಂತಿಮ ದರ್ಶನ ಪಡೆದರು. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಅಭಿಮಾನಿಗಳ ಹಾಗೂ ಕಾರ್ಯಕರ್ತರ ರೋಧನ ಮುಗಿಲುಮುಟ್ಟಿತ್ತು.
ಮನೆಯ ಮುಂಭಾಗದಲ್ಲಿಯೇ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಬ್ಯಾರಿಕೇಡ್ ಹಾಕಿ, ಸರತಿ ಸಾಲಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಿವೈಎಸ್’ಪಿ ಸುಧಾಕರ್ ನಾಯ್ಕ್, ನಗರಸಭೆ ಆಯುಕ್ತ ಮನೋಹರ್, ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಾಗದಂತೆ ವ್ಯವಸ್ಥೆ ಮಾಡಿದ್ದಾರೆ.
ಅಂತ್ಯ ಸಂಸ್ಕಾರ:
ಎಂ.ಜೆ. ಅಪ್ಪಾಜಿಗೌಡರ ಅಂತ್ಯ ಸಂಸ್ಕಾರ ಇಂದು 11 ಗಂಟೆಗೆ ಗೋಣಿಬೀಡು ತೋಟದಲ್ಲಿ ನಡೆಯಲಿದೆ.
ಬೆಳಿಗ್ಗೆ 10.30ರವರೆಗೂ ಮನೆಯ ಮುಂಭಾಗದಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನಂತರ ಮೆರವಣಿಗೆಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, 11 ಗಂಟೆ ಸುಮಾರಿಗೆ ಗೋಣಿಬೀಡು ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ನೌಕರರಾಗಿದ್ದ ವೇಳೆ ಕಾರ್ಮಿಕ ಸಂಘಟನೆಯ ಮುಂದಾಳತ್ವ ವಹಿಸಿದ್ದ ಅಪ್ಪಾಜಿ ಗೌಡ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿದರು.1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭದ್ರಾವತಿಯ ಶಾಸಕರಾಗಿ ಆಯ್ಕೆಯಾದರು. ನಂತರ. 1999ರಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದ ಗೌಡರು 2018ರ ಚುನಾವಣೆಯಲ್ಲಿ ಸೋತಿದ್ದರು.ಇದಾದ ನಂತರ ಪಕ್ಷದ ಸಂಘಟನೆ ಹಾಗೂ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದರು. ತಮ್ಮ ಎದುರಾಳಿ ಹಾಗೂ ಹಾಲಿ ಶಾಸಕ ಕಾಂಗ್ರೆಸ್ ನ ಬಿ.ಕೆ.ಸಂಗಮೇಶ ವಿರುದ್ಧ ಸಮಯ ಸಿಕ್ಕಾಗಲೆಲ್ಲಾ ಹರಿಹಾಯುತ್ತಿದ್ದರು.ಭದ್ರಾವತಿಯ ತಹಸೀಲ್ದಾರ್ ವಿರುದ್ಧ ಆಗಸ್ಟ್ 31 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರಾದರೂ ನಂತರ ಅದು ರದ್ದಾಗಿತ್ತು.