ನವದೆಹಲಿ,ಆ.18:
ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಸ್ಥಾನ ದೊರಕಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಗೆ ಅನಿವಾರ್ಯ ಹಾಗೂ ಅತ್ಯಗತ್ಯ ಎಂಬುದನ್ನು ಹೈ ಕಮಾಂಡ್ ಸಾಬೀತು ಪಡಿಸಿದ್ದಾರೆ.
ಚುನಾವಣೆ ವೇಳೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಚುನಾವಣಾ ಸಮಿತಿಯಿಂದ ಹಾಗೂ ಸಂಸದೀಯ ಮಂಡಳಿಯಿಂದ ನಿತಿನ್ ಗಡ್ಕರಿ ಹಾಗೂ ಹಿರಿಯ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದೆ.
ರಾಜ್ಯ ಚುನಾವಣೆಯಲ್ಲಿ ದಾಖಲೆ ಎಂಬಂತೆ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ನಂತರ ಯೋಗಿಗೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಸ್ಥಾನ ನೀಡಲಾಗುತ್ತದೆ ಎಂಬ ಊಹಾಪೋಹದ ನಡುವೆ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದು ವರದಿ ಹೇಳಿದೆ.
ಸಂಸದೀಯ ಮಂಡಳಿ ಬಿಜೆಪಿಯ ಅತ್ಯುನ್ನತ ಸಮಿತಿಯಾಗಿದೆ. ಸಂಸದೀಯ ಮಂಡಳಿಗೆ ಮುಖ್ಯಮಂತ್ರಿಗಳ ಆಯ್ಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ನೂತನ ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸುಧಾ ಯಾದವ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸರ್ಬಾನಂದ್ ಸೋನಾವಾಲ್, ಕೆ.ಲಕ್ಷ್ಮಣ್ ಮತ್ತು ಸತ್ಯನಾರಾಯಣ್ ಜಾಟಿಯಾಗೆ ಸ್ಥಾನ ನೀಡಲಾಗಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಭೂಪೇಂದ್ರ ಹೂಡಾ ಮತ್ತು ಓಂ ಮಥುರ್ ಸ್ಥಾನ ಪಡೆದಿದ್ದಾರೆ. ಆದರೆ ಚುನಾವಣಾ ಸಮಿತಿಯಿಂದ ಷಹನವಾಜ್ ಹುಸೈನ್ ಅವರನ್ನು ಕೈಬಿಡಲಾಗಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಸೋನಾವಾಲ್ ಗೆ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲೂ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ರೂಪಿಸಿದೆ ಎಂದು ವರದಿ ತಿಳಿಸಿದೆ.