ಬಿಜೆಪಿಯವರಿಗೆ ರಾಷ್ಟ್ರಧ್ವಜ ಹಾರಿಸುವ ನೈತಿಕತೆ ಇಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಬಿಜೆಪಿಯವರು ಪಾಲ್ಗೊಂಡಿಲ್ಲ. ತ್ಯಾಗಬಲಿದಾನ ಮಾಡಿಲ್ಲ. ಮನೆಮನೆ ಮೇಲೂ ರಾಷ್ಟ್ರಧ್ವಜ ಬಿಜೆಪಿ ಚುನಾವಣೆ ಗಿಮಿಕ್ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಮಲೆನಾಡುಸಿರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ವಿವಿಧ ಇಲಾಖೆ ಆರ್ಥಿಕ ನೆರವಿನಿಂದ ೭೦ಸಾವಿರ ಧ್ವಜ ಸಿದ್ದಪಡಿಸಲಾಗಿದೆ. ಇದರಲ್ಲಿ ಶಾಸಕ ಹಾಲಪ್ಪ ಅವರ ಕೊಡುಗೆ ಏನೂ ಇಲ್ಲ. ಗಣಪತಿ ಕೆರೆ ಅಂಗಳದಲ್ಲಿ ಹಾಕಿದ ಧ್ವಜ ಐದು ಸಾರಿ ಹರಿದು ಹೋಯಿತು. ಆಗ ಶಾಸಕರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ರಾಷ್ಟ್ರಧ್ವಜ ಜಾತ್ಯಾತೀತವಾಗಿ ಎಲ್ಲರ ಮನೆಯಲ್ಲೂ ಹಾರಿಸುತ್ತಾರೆ. ಶಾಸಕ ಹಾಲಪ್ಪ ಅದನ್ನೇ ಚುನಾವಣಾ ಅಜೆಂಡವಾಗಿ ಪರಿಗಣಿಸುತ್ತಿರುವುದು ಬೇಸರದ ಸಂಗತಿ. ಅಷ್ಟಕ್ಕೂ ಭಾರತದ ಸ್ವಾತಂತ್ರ್ಯಕ್ಕೆ ಶಾಸಕ ಹಾಲಪ್ಪ ಕೊಡುಗೆ ಏನು. ರಾಷ್ಟ್ರಧ್ವಜಕ್ಕೆ ವಿನಿಯೋಗಿಸುತ್ತಿರುವ ಹಣವನ್ನು ನೆರೆಯಿಂದ ಸಂಕಷ್ಟ ಎದುರಿಸುತ್ತಿರುವ ಬಡಜನರಿಗೆ ನೀಡಲಿ. ಕ್ಷೇತ್ರವ್ಯಾಪ್ತಿಯಲ್ಲಿ ವಿಪರೀತ ಮಳೆಯಿಂದ ನೂರಾರು ಮನೆ ಕುಸಿದು ಹೋಗಿದೆ. ತೋಟ ಮತ್ತು ಗದ್ದೆಗಳ ಮೇಲೆ ನೆರೆಯಿಂದ ಮಣ್ಣು ತುಂಬಿಕೊಂಡಿದೆ. ರೈತರು ಎರಡು ಮೂರು ಬಾರಿ ನಾಟಿ ಮಾಡಿದ್ದು ಕೊಚ್ಚಿಕೊಂಡು ಹೋಗಿದೆ. ನೊಂದ ರೈತರ ಕಣ್ಣೀರು ಒರೆಸಬೇಕಾದ ಜನಪ್ರತಿನಿಧಿ ಬಾವುಟ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನೊಂದ ಜನರ ಶಾಪ ಸರ್ಕಾರಕ್ಕೆ ಮತ್ತು ಶಾಸಕರಿಗೆ ತಟ್ಟುತ್ತದೆ ಎಂದು ಹೇಳಿದರು.
ಸರ್ಕಾರದಿಂದ ಪರಿಹಾರ ಕೊಡಿಸಿ, ವೈಯಕ್ತಿಕವಾಗಿ ಅಲ್ಪಸ್ವಲ್ಪ ಆರ್ಥಿಕ ನೆರವು ನೀಡಬೇಕಾಗಿದ್ದ ಶಾಸಕ ಹಾಲಪ್ಪ ಟೆಂಪಲ್ ರನ್‌ನಲ್ಲಿ ಬಿಜಿಯಾಗಿದ್ದಾರೆ. ಹಿಂದೆ ಧರ್ಮಸ್ಥಳದಲ್ಲಿ ಸುಳ್ಳು ಪ್ರಮಾಣ ಮಾಡಿದ್ದೀರಿ ಎಂದು ಯಾರೋ ಹೇಳಿರಬೇಕು. ಅದಕ್ಕೆ ಶಾಸಕರು ತಮ್ಮ ಕುಟುಂಬದ ಜೊತೆ ತಪ್ಪು ಕಾಣಿಕೆ ಹಾಕಲು ಧರ್ಮಸ್ಥಳಕ್ಕೆ ಹೋಗಿರಬೇಕು. ಜನ ಸಂಕಷ್ಟದಲ್ಲಿರುವ ಟೆಂಪಲ್‌ರನ್ ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಶಾಸಕರು ಜನರ ಸಮಸ್ಯೆಗೆ ಮೊದಲು ಸ್ಪಂದಿಸಲಿ ಎಂದರು.
ತಾಲ್ಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದಲ್ಲಿ ರಸ್ತೆಗೆ ಬಿದ್ದಿದ್ದ ಮರವನ್ನು ಕಡಿದು ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಂಡ ೧೦ಕ್ಕೂ ಹೆಚ್ಚು ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ನಡೆಸಿರುವ ದೌರ್ಜನ್ಯ ಖಂಡನೀಯ. ಅಮಾಯಕರ ಕೈಗೆ ಸ್ಲೇಟ್ ಕೊಟ್ಟು ಫೋಟೋ ಹೊಡೆಸಿ, ಗಂಧ ಕಳ್ಳತನ ಮಾಡಿದವರಂತೆ ಬಿಂಬಿಸಿದ್ದು ಅಮಾನವೀಯವಾಗಿದೆ. ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಕೇಸು ಅಮಾಯಕರ ಮೇಲೆ ಹಾಕಲು ಬಿಟ್ಟಿರಲಿಲ್ಲ ಎಂದು ಹೇಳಿದರು.
ಶಾಸಕ ಹಾಲಪ್ಪ ಅವರ ಅವಧಿಯಲ್ಲಿ ತಾಲ್ಲೂಕು ಕುಡುಕರ ಸಾಮ್ರಾಜ್ಯವಾಗಿದೆ. ಬೆಂಗಳೂರಿನಲ್ಲಿ ತಮ್ಮದೇ ಐದಾರು ಬಾರ್ ಹೊಂದಿರುವ, ತಾಲ್ಲೂಕಿನ ಹಳ್ಳಿಗಳಲ್ಲೂ ಎಂ.ಎಸ್.ಐ.ಎಲ್. ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿರುವ ಶಾಸಕರು ವ್ಯಸನಮುಕ್ತ ಸಮಾಜ ನಿರ್ಮಾಣದ ಜಾಥಾದಲ್ಲಿ ಪಾಲ್ಗೊಂಡಿದ್ದು ಹಾಸ್ಯಾಸ್ಪದ ಸಂಗತಿ. ನಗರವ್ಯಾಪ್ತಿಯಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ಶಾಸಕ ಹಾಲಪ್ಪ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಪ್ಪ ಮುಸ್ಲೀಂ ಸಮುದಾಯವನ್ನು ಟಾರ್ಗೇಟ್ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಮ್ಮದೇ ಕಾರ್ಯಕರ್ತರನ್ನು ರಕ್ಷಣೆ ಮಾಡಲು ವಿಫಲವಾಗಿದೆ. ಶಿವಮೊಗ್ಗದಲ್ಲಿ ನಡೆದ ಹಿಂದೂ ಹರ್ಷ ಹತ್ಯೆ, ಪುತ್ತೂರಿನಲ್ಲಿ ನಡೆದ ಪ್ರವೀಣ್ ನೆಟ್ಯಾರ್ ಹತ್ಯೆಯ ಹೊಣೆ ಹೊತ್ತು ಗೃಹ ಸಚಿವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದರು. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸ್ವಂತ ಮನೆ ಕಟ್ಟಿಸಿಕೊಡುವ ಜೊತೆಗೆ ಅವರ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಿ ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಕಾಂಗ್ರೇಸ್ ಪ್ರಮುಖರಾದ ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಯಶವಂತ ಪಣಿ, ತಾರಾಮೂರ್ತಿ, ದಿನೇಶ್ ಡಿ., ಅನ್ವರ್ ಭಾಷಾ, ಶ್ರೀನಾಥ್, ನಾರಾಯಣಪ್ಪ, ಸಂತೋಷ್ ಸದ್ಗುರು, ರವಿಕುಮಾರ್, ಶ್ರೀಧರ್ ಪಾಟೀಲ್, ಆನಂದ್ ಭೀಮನೇರಿ, ಕೃಷ್ಣಪ್ಪ ಹಾಜರಿದ್ದರು.