ಶಿವಮೊಗ್ಗ

ನಿಗಧಿತ ಅವಧಿಗೂ ಮುನ್ನವೇ ಭದ್ರಾ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೇಷ್ಮೇ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಕೆ.ಸಿ.ನಾರಾಯಣಗೌಡ ಅವರು ಹೇಳಿದರು.


ಅವರು ಇಂದು ಭದ್ರಾ ಜಲಾಶಯಕ್ಕೆ ಸ್ಥಳೀಯ ಮುಖಂಡರೊಂದಿಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿ ಮಾತನಾಡುತ್ತಿದ್ದರು. ನಿರೀಕ್ಷೆಯಂತೆ ಮಳೆಬಿದ್ದಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಿದ್ದು, ಕೃಷಿಯಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದ ಅವರು ರಾಜ್ಯದ ಕೆಲ ಪ್ರದೇಶಗಳಲ್ಲಿ ಅತೀವೃಷ್ಠಿಯಾಗಿದ್ದು, ಬೆಳೆಹಾನಿ, ಜನ-ಜಾನುವಾರು ಹಾನಿಗಳ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದವರು ನುಡಿದರು.


ಕಳೆದ ಮೂರು ವರ್ಷಗಳಿಂದ ರಾಜ್ಯದ ಜಲಾಶಯಗಳು ನಿರಂತರವಾಗಿ ಭರ್ತಿಯಾಗುತ್ತಿರುವುದು ರಾಜ್ಯದ ಸಮೃದ್ಧಿಯ ಸಂಕೇತವಾಗಿದೆ. ವಿಶೇಷವಾಗಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಸಕಾಲದಲ್ಲಿ ನೀರೊದಗಿಸಲು ಕ್ರಮ ವಹಿಸಲಾಗುವುದಲ್ಲದೇ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗೆ ಆಡಳಿತಾರೂಢ ಸರ್ಕಾರವು ಅಗತ್ಯ ಅನುದಾನ ಒದಗಿಸಲಿದೆ. ವೈಯಕ್ತಿಕವಾಗಿ ಮಂಡ್ಯ ಜಿಲ್ಲೆಯ ನಿವಾಸಿಯಾಗಿರುವ ನನಗೆ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಅವಕಾಶ ಒದಗಿ ಬಂದಿರುವುದಕ್ಕೆ ಸಂತಸ ವ್ಯಕ್ತಿಪಡಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ವಿಷಾಧ ವ್ಯಕ್ತಪಡಿಸಿದ ಅವರು, ರಾಜ್ಯದ ಎಲ್ಲಾ ವರ್ಗಗಳ ಜನರು ಶಾಂತಿ-ಸಹಬಾಳ್ವೆಯಿಂದ ನೆಮ್ಮದಿಯ ಜೀವನ ನಿರ್ವಹಿಸುವಂತಾಗಬೇಕು. ಶಾಂತಿಗೆ ಭಂಗ ತರುವ ಯಾವುದೇ ಕೃತ್ಯಕ್ಕೆ ಮುಂದಾಗಬಾರದು ಎಂದವರು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ೫.೦೦ಲಕ್ಷ ಹೆಕ್ಟೇರ್ ಭೂಪ್ರದೇಶವಿದ್ದು, ಪ್ರಸ್ತುತ ೨.೫೦ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರುದೊಗಿಸಲಾಗುತ್ತಿದೆ. ಉಳಿದ ಪ್ರದೇಶಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ನೆರವಿನಿಂದ ನೀರನ್ನು ಒದಗಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದ್ದು, ಕಾiಗಾರಿಗಳು ಆರಂಭಗೊಂಡಿವೆ ಎಂದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರಾರಾಮಯ್ಯ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ|| ವೀರಭದ್ರಪ್ಪ, ರಿಜಿಸ್ಟ್ರಾರ್ ಶ್ರೀಮತಿ ಅನುರಾಧ ಜಿ. ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವಿವಿಧ ಶ್ರೇಣಿಯ ಅಭಿಯಂತರರು, ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂಧಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!