ಶಿವಮೊಗ್ಗ,
ಬಿ.ಆರ್.ಪಿ. ಯಲ್ಲಿರುವ ಭದ್ರಾ ಜಲಾಶಯ ಪ್ರಸ್ತುತ ವರ್ಷ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತುಂಬಿದ ಭದ್ರೆಗೆ ಬಾಗಿನ ಅರ್ಪಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಹೆಚ್.ಆರ್. ಬಸವರಾಜಪ್ಪ, ರೈತರ ಜೀವನಾಡಿಯಾದ ಭದ್ರಾ ಅಣೆಕಟ್ಟು ಹೋದ ವರ್ಷ ಈ ದಿನಕ್ಕೆ ೧೭೭ ಅಡಿ ಮಾತ್ರ ಭರ್ತಿಯಾಗಿತ್ತು. ನಂತರ ದಿನಗಳಲ್ಲಿ ಭರ್ತಿಯಾಗಿದೆ. ಈ ವರ್ಷ ಬಹಳ ಮುಂಚಿತವಾಗಿಯೇ ಅಣೆಕಟ್ಟು ಭರ್ತಿಯಾಗಿ ನದಿಗೆ ನೀರು ಬಿಟ್ಟಿರುವುದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ತಂದಿದ್ದು, ರೈತರ ಜೀವಜಲವಾದ ಭದ್ರಾಗೆ ಬಾಗಿನ ಅರ್ಪಿಸಲಾ ಗಿದೆ ಎಂದು ತಿಳಿಸಿದ್ದಾರೆ.
ಹೋದ ವರ್ಷ ಸುಮಾರು ೨,೬೦,೦೦೦ ಎಕರೆಯಲ್ಲಿ ಅಡಿಕೆ, ತೆಂಗು, ಭತ್ತ, ಮೆಕ್ಕೆಜೋಳ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ. ಪ್ರಸಕ್ತ ವರ್ಷದಲ್ಲೂ ಸಹ ೨,೬೦,೦೦೦ ಎಕರೆಯಲ್ಲಿ ೨ ಬೆಳೆ ಬೆಳೆಯಬಹುದಾಗಿದೆ. ಹೋದ ವರ್ಷ ಹನಿ ನೀರನ್ನು ವ್ಯರ್ಥ ಮಾಡದೆ ರೈತರು ಸದ್ಬಳಕೆ ಮಾಡಿಕೊಂಡಿದ್ದು, ಈ ವರ್ಷವೂ ಸಹ ಅದೇ ರೀತಿ ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭದ್ರಾ ಅಣೆಕಟ್ಟೆಯ ನಾಲಾಗಳನ್ನು ಆಧುನೀಕರಣ ಮಾಡಿರುವುದರಿಂದ ೧೨.೫ ಟಿಎಂಸಿ ಉಳಿತಾಯವಾಗುತ್ತಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಗೆ ಡಿಪಿಆರ್ ಮಾಡಲಾ ಗಿದೆ. ಆದರೆ ಸರಿಯಾದ ರೀತಿಯಲ್ಲಿ ಮುಖ್ಯ ಕಾಲುವೆಯ ಆಧುನೀಕರಣ ಪೂರ್ತಿಯಾಗಿಲ್ಲ.
ಉಪ ಕಾಲುವೆಗಳ ಆಧುನೀಕರಣ ಮಾಡಿಲ್ಲ. ಹಾಗಾಗಿ ಹೆಚ್ಚು ನೀರು ಪೋಲಾಗುವುದನ್ನು ತಡೆಗಟ್ಟಲು ರೈತರ ಜಮೀನಿನವರೆಗೆ ಉಪ ಕಾಲುವೆಗಳನ್ನು ಆಧುನೀಕರಣ ಮಾಡಲು ಯೋಜನಾ ವೆಚ್ಚ ಮಾಡಿಸಿ ಸರ್ಕಾರ ಹಣ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ೧೨.೫ ಟಿಎಂಸಿ ನೀರನ್ನ ತುಂಗಾ ನದಿಯಿಂದಲೇ ಕೊಡಲು ಡಿಪಿಆರ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ ಅರಬಿಳಚಿ, ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ. ಮಹೇಶ್ವರಪ್ಪ, ಜಿಲ್ಲಾ ಎಂ.ಡಿ ನಾಗರಾಜ್ ಮಳವಳ್ಳಿ ಮತ್ತಿತರರಿದ್ದರು.