ಸಮಾನರೂಪ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಇಲಾಖೆ
ಜುಲೈ 01ರಿಂದಲೇ ಪ್ರಾರಂಭವಾಗಿರುವ ಯುಜಿ ಪ್ರವೇಶ ಪ್ರಕ್ರಿಯೆ
ಶಂಕರಘಟ್ಟ, ಜು. 10:
ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಜುಲೈ 01ರಿಂದಲೇ ಪ್ರಾರಂಭವಾಗಿದ್ದು, ಜು. 30ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇಲಾಖೆಯಡಿ ಬರುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ, ಅನುದಾನ ಮತ್ತು ಅನುದಾನರಹಿತ ಕಾಲೇಜುಗಳಿಗೆ ಈ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕುವೆಂಪು ವಿಶ್ವವಿದ್ಯಾಲಯವು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಳವಡಿಸಿಕೊಂಡಿದ್ದು, ವಿವಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಜುಲೈ 01ರಿಂದಲೇ ಪ್ರಾರಂಭಿಸಲು ಈಗಾಗಲೇ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕುಲಸಚಿವೆ ಜಿ. ಅನುರಾಧ ಅವರು ತಿಳಿಸಿದ್ದಾರೆ.
ಎಲ್ಲ ಪ್ರವೇಶ ಪ್ರಕ್ರಿಯೆಗಳು ಕರ್ನಾಟಕ ಸರ್ಕಾರದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಪೋರ್ಟಲ್ ಮೂಲಕ ನಡೆಯಲಿದ್ದು, ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಶೈಕ್ಷಣ ಕ ಸಂಸ್ಥೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರತಿ ಕಾಲೇಜುಗಳ ಹಂತದಲ್ಲಿ UUCMS ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಬಹುದು.
ಇನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ-ಗವರ‍್ನೆನ್ಸ್ ಘಟಕ ಸ್ಥಾಪಿಸಲಾಗಿದ್ದು, ಎನ್‌ಇಪಿ ಪ್ರವೇಶ ಪ್ರಕ್ರಿಯೆಯ ಯಾವುದೇ ಗೊಂದಲಗಳಿದ್ದರೂ ನಿಭಾಯಿಸಲು ಸನ್ನದ್ಧವಾಗಿದೆ. ಹೆಚ್ಚಿನ ಮಾಹಿತಿಗೆ ಘಟಕದ ಮುಖ್ಯಸ್ಥ ಪ್ರೊ. ಅಶ್ವಕ್ ಅಹಮದ್ ಅವರನ್ನು (98451-42267) ಸಂಪರ್ಕಿಸಬಹುದು ಎಂದು ಕುಲಸಚಿವೆ ಜಿ. ಅನುರಾಧ ಅವರು ತಿಳಿಸಿದ್ದಾರೆ.