Tunga Taranga Special News/ 04-07-2022
ಹುಣಸೆಕಟ್ಟೆ ಗ್ರಾಮದ ಬಗರ್ಹುಕುಂ ಜಾಗಕ್ಕೆ ಬೇಲಿ, ಅಲ್ಲಿಯೇ ಬದುಕಿ ಬಾಳಿರುವ ರೈತನೀಗ ಅತಂತ್ರ
ಶಿವಮೊಗ್ಗ, ಜು.೦೪
ಕಳೆದ ಕೆಲ ತಿಂಗಳ ಹಿಂದಷ್ಟೆ ಭದ್ರಾವತಿ ತಾಲ್ಲೂಕು ಹುಣಸೆಕಟ್ಟೆ ಜಂಕ್ಷನ್ನಲ್ಲಿ ಜಮೀನು ಖರೀದಿಸಿ ಅಡಿಕೆ ಬೆಳೆಯಲು ಮುಂದಾಗಿರುವ ಭದ್ರಾವತಿ ಲಕ್ಷ್ಮೀ ನರ್ಸಿಂಗ್ ಹೋಂನ ವೈದ್ಯ ಡಾ. ರಾಮಕೃಷ್ಣ ಅವರು ಅಲ್ಲಿಯೇ ಬದುಕಿ ಬಾಳುತ್ತಾ ಬದುಕು ಕಟ್ಟಿಕೊಂಡಿರುವ ಜಮೀನಿನ ರಸ್ತೆಯನ್ನೂ ಕಬಳಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಹುಣಸೆಕಟ್ಟೆ ಗ್ರಾಮದ ಸರ್ವೇ ನಂ.೪೭ರಲ್ಲಿ ೪ಎಕರೆ ಜಮೀನು ಹೊಂದಿರುವ ರೈತ ಬಿ.ಎನ್.ರಾಧಾಕೃಷ್ಣ ಅವರಿಗೆ ತಂದೆಯಿಂದ ಈ ಆಸ್ತಿ ಬಂದಿತ್ತು ಇದಕ್ಕೆ ಹೊಂದಿಕೊಂಡಂತಿರುವ ಸರ್ವೆ ನಂ.೪೨ರ ೧ಎಕರೆ ೩೭ಗುಂಟೆ ಸರ್ಕಾರಿ ಖುಷ್ಕಿ ಜಮೀನಿನಲ್ಲಿ ರಸ್ತೆಯನ್ನಾಗಿ ಬಳಸಿಕೊಂಡು ಬದುಕಲು ಎಂಆರ್ಟೂ/೨೦೦೮-೨೦೦೯ ಅಡಿಯಲ್ಲಿ ತಂದೆಯ ಹೆಸರಿಗೆ ಖಾತೆಯಾಗಿರುವ ಜಾಗವನ್ನು ಈ ವೈದ್ಯರು ಈಗ ಬೇಲಿ ಹಾಕುವ ಮೂಲಕ ನೈಜ ರೈತನ ಜಮೀನಿಗೆ ರಸ್ತೆ ಇಲ್ಲದಂತೆ ಮಾಡಿದ್ದಾರೆ.
ಕಳೆದ ಮಾರ್ಚ್ ೨೪ರಲ್ಲಿ ಜಮೀನು ಖರೀದಿಸಿರುವ ಡಾ.ರಾಮಕೃಷ್ಣ ಅವರು, ನನ್ನ ಜಮೀನಿಗೆ ಓಡಾಡಲು ಇದ್ದ ರಸ್ತೆಯನ್ನು ಸೇರಿದಂತೆ ನಾನು ಸಾಗುವಳಿ ಮಾಡುತ್ತಿದ್ದ ಬಗರ್ಹುಕುಂ ಜಾಗವನ್ನು ಸೇರಿಸಿ ಹಲವು ರೌಡಿಗಳನ್ನು ಮುಂದೆ ಬಿಟ್ಟು ಬೆದರಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಅನ್ನದಾತ ಆರೋಪಿಸಿದ್ದಾನೆ.
ಈ ಸಂಬಂಧ ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಭದ್ರಾವತಿ ತಹಶೀಲ್ದಾರರು, ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಭದ್ರಾವತಿ ತಹಶೀಲ್ದಾರರು ಸದ್ದು, ಗದ್ದಲವಿಲ್ಲದಂತೆ ಈ ಜಾಗವನ್ನು ವೈದ್ಯರ ಹೆಸರಿಗೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಹತ್ತು ಹಲವು ಚಿಕ್ಕ ಪುಟ್ಟ ಜಗಳಗಳು, ರಾಜಿ ಪಂಚಾಯಿತಿಗಳು ನಡೆದಿದ್ದು, ಶಾಸಕ ಸಂಗಮೇಶ್ವರ್ ಮಾತಿನಂತೆ ಅವರ ಸಹೋದರ ನಗರ ಸಭೆಯ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಪರಿಸರ ವಾದಿ ರೈತ ಪರಿಸರ ಶಿವರಾಂ ಹಾಗೂ ಭದ್ರಾವತಿ ತಹಶೀಲ್ದಾರರು ರೈತ ಓಡಾಡಲು ಜಾಗ ನೀಡುವಂತೆ ವಿನಂತಿಸಿದ್ದರೂ ವೈದ್ಯರು ಇದನ್ನು ಕೇಳದೇ ಅಲ್ಲಿನ ಚರಂಡಿಗೆ ಹಾಕಿದ್ದ ಪೈಪನ್ನು ಬೇರೆಡೆಗೆ ಸಾಗಿಸಿ ಬೇಲಿ ಹಾಕಿರುವುದನ್ನು ಹುಣಸೆಕಟ್ಟೆ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ.
ವೈದ್ಯರು ಕೃಷಿಗೆ ಮುಂದಾದಾಗ ಸಂತೋಷ ಪಡುವ ರೈತರು, ಈ ವೈದ್ಯರ ವಿಚಾರದಲ್ಲಿ ಇಷ್ಟೊಂದು ಆಕ್ಷೇಪ ವ್ಯಕ್ತಪಡಿಸಲು ಕಾರಣವಾದರೂ ಅರ್ಥವಾಗಬೇಕಿದೆ. ೧೯೮೪ರಲ್ಲೇ ಬಗರ್ಹುಕುಂ, ಬಂಜರು ಭೂಮಿಯಾದ ಸರ್ವೇ ನಂ.೪೨ರ ೨ ಎಕರೆ ೩೦ಗುಂಟೆ ಜಾಗದಲ್ಲಿನ ಪಶ್ಚಿಮ ದಿಕ್ಕಿನಲ್ಲಿ ೧೦ಅಡಿ ರಸ್ತೆ, ಈ ರೈತ ರಾಧಾಕೃಷ್ಣ ಅವರ ತಂದೆಯ ಹೆಸರಿಗೆ ಮಂಜೂರಾಗಿತ್ತು. ಇಲ್ಲಿಯವರೆಗೆ ಇಲ್ಲದಿರುವ ಗಲಾಟೆ ಡಾ.ರಾಮಕೃಷ್ಣ ಅವರು ಈ ಜಮೀನುಕೊಂಡ ನಂತರ ಸರ್ಕಾರದ ಬಗರ್ಹುಕುಂ ಜಾಗಕ್ಕೂ ಬೇಲಿಹಾಕಿಕೊಂಡಿರುವುದನ್ನು ಆಕ್ಷೇಪಿಸಿ ಇಂದು ಮತ್ತೆ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಜಾಗದಲ್ಲಿ ಸರ್ಕಾರಿ ಪಿಯು ಕಾಲೇಜು ಕಟ್ಟಿ
ಹುಣಸೆಕಟ್ಟೆ ಜಂಕ್ಷನ್ನ ಸರ್ವೆ ನಂ.೪೨ರಲ್ಲಿರುವ ೪ಎಕರೆ ಸರ್ಕಾರಿ ಜಮೀನನ್ನು ಭದ್ರಾವತಿ ಖಾಸಗಿ ನರ್ಸಿಂಗ್ ಹೋಂನ ವೈದ್ಯ ಡಾ. ರಾಮಕೃಷ್ಣ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಸರ್ವೇ ನಂ.೫೭,೫೮ರಲ್ಲಿ ೬.೩ಎಕರೆ ಜಾಗವನ್ನು ಇತ್ತೀಚೆಗೆ ಕೊಂಡು ಎಲ್ಲದಕ್ಕೂ ಅಡಿಕೆ ಗಿಡವನ್ನು ನೆಟ್ಟಿದ್ದಾರೆ. ಸರ್ಕಾರಿ ಜಾವನ್ನು ಅಕ್ರಮವಾಗಿ ಬಳಸಿಕೊಂಡಿರುವ ಆ ಜಾಗವನ್ನು ತೆರವುಗೊಳಿಸಿ ಗ್ರಾಮದ ಸುತ್ತಮುತ್ತಲಿನ ಬಡ ಮಕ್ಕಳ, ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪಿ.ಯು ಕಾಲೇಜ್ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ.
ಡಾ.ರಾಮಕೃಷ್ಣ ಅವರು, ಇತ್ತೀಚೆಗೆ ಖರೀದಿಸಿರುವ ೪ಎಕರೆ ಜಾಗದಲ್ಲಿ ೧.೩೬ಎಕರೆ ಕೊಂಡು ಉಳಿದ ಸರ್ಕಾರಿ ಜಾಗದಲ್ಲಿ ಅಡಿಕೆ ಗಿಡ ನೆಟ್ಟಿದ್ದಾರೆ. ಇಲ್ಲಿಯೇ ಇರುವ ರಾಣಿಚೆನ್ನಮ್ಮ ವಸತಿ ಶಾಲೆಯ ಜೊತೆಗೆ ಉಳಿದ ಜಾಗವನ್ನು ಸರ್ಕಾರಿ ಪಿಯು ಕಾಲೇಜಿಗೆ ಮಂಜೂರು ಮಾಡುವಂತೆ ಗ್ರಾಮದ ಹೂವಮ್ಮ, ಬುರಿದ, ರಂಜಿತ, ಯೋಗಾನಂದ, ಕೊರಗಪ್ಪ, ಕಾಮಾಕ್ಷಿ, ಸುಜಾತ, ನಿತ್ಯಾನಂದ, ಶಾಂತಮ್ಮ, ಚೆನ್ನಪ್ಪ, ಶಿವರಾಜ್, ಮಂಜುಳ, ನಿರ್ಮಲ, ಹೊನ್ನಮ್ಮ, ಪಲ್ಲವಿ, ಹೇಂಮಂತ್ ಹಾಗೂ ಇತರರು ಒತ್ತಾಯಿಸಿದ್ದಾರೆ.
ಜನವರಿ ೨೪ರಂದೇ ಡಾ.ರಾಮಕೃಷ್ಣ ಅವರಿಗೆ ವಿವಾಧವಿರುವ ಜಮೀನಿನ ಖಾತೆ ಪಹಣಿ ಮಾಡಿಕೊಡದಿರಲು ಪತ್ರ ನೀಡಿದ್ದರೂ ೨೪-೦೩-೨೦೨೨ರಂದು ಈ ವೈದ್ಯರಿಗೆ ಪಹಣಿ ಮಾಡಿಕೊಟ್ಟಿರುವುದೇ ಈ ರಗಳೆಗೆ ಕಾರಣವಾಗಿದೆ. ನಿನ್ನೆ ನಾವು ಸರ್ವೆ ನಂ.೪೨ರ ರಸ್ತೆಗೆ ಹಾಕಿದ್ದ ೨*೧೬ ಅಡಿ ಸಿಮೆಂಟ್ ಪೈಪನ್ನು ರೌಡಿಗಳೊಂದಿಗೆ ಕದ್ದುಕೊಂಡು ಹೋಗಿದ್ದಾರೆ. ಅವರನ್ನುಬಂಧಿಸಿ ಸೂಕ್ತ ಕ್ರಮಕೈಗೊದಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ನನ್ನ ಕೃಷಿ ಚಟುವಟಿಕೆಗೆ ತೊಂದರೆ ನೀಡುತ್ತಿರುವ ಈ ವೈದ್ಯರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವೈದ್ಯರು ಈ ಅನ್ನದಾತನ ಕಷ್ಟವನ್ನು ಕಿವಿಗೊಟ್ಟು ಕೇಳಬಹುದಿತ್ತು. ಗ್ರಾಮದ ಹಿರಿಯರ ಮಾತಿಗೆ ಬೆಲೆ ಕೊಡಬಹುದಿತ್ತು. ಬಗರ್ಹುಕುಂ ಜಾಗದಲ್ಲಿ ಇನ್ನೋರ್ವ ಅನ್ನದಾತನ ಜಮೀನಿನ ರಸ್ತೆಗೆ ಜಾಗನೀಡಿಗೌರವವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಆಶಾಂತಿಯ ವಾತಾವರವನ್ನು ಸೃಷ್ಟಿಸುವ ಅಗತ್ಯವಿತ್ತೆ.





