ಸಾಗರ,ಜು.02:
ಪತ್ರಿಕೆ ವಿತರಿಸುವ ಮೂಲಕ ನಿತ್ಯದ ಬದುಕಿಗೆ ದಾರಿಮಾಡಿಕೊಂಡಿದ್ದ ಯುವಕನೋರ್ವನಿಗೆ ಇಂದು ಸರ್ಕಾರಿ ಬಸ್ ಮೃತ್ಯುವಾಗಿ ಕಾಡಿದ್ದು ದುರಂತವೇ ಹೌದು.
ಕೆ.ಆರ್.ಟಿ.ಸಿ (ಸರ್ಕಾರಿ)ಬಸ್ಸು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ, ಪತ್ರಿಕಾ ವಿತರಕ ಇಲ್ಲಿನ ಗಾಂಧಿನಗರ ಬೆಳಲಮಕ್ಕಿಯ ಗಣೇಶ್ ( ಚೌಡಪ್ಪ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರಿಗೆ ಇನ್ನೂ ಇಪ್ಪತ್ತರ ಹರೆಯ.
ಸಾಗರದ ಅಗ್ರಹಾರದ ಬಳಿ ಇಂದು ಬೆಳಗ್ಗೆ ಈ ಅಪಘಾತ ನಡೆದಿದೆ. ಇದೇ ಸಂದರ್ಭದಲ್ಲಿ ಪಕ್ಕದಲ್ಲೇ ಹೋಗುತ್ತಿದ್ದ ಇನ್ನೊರ್ವ ಪತ್ರಿಕಾ ವಿತರಕ ಕೆಳಗೆ ಮಣ್ಣಿನ ಮೇಲೆ ಬಿದ್ದುದ್ದರಿಂದ ಬಚಾವಾಗಿದ್ದಾನೆ.
ಗಣೇಶ ಗಾಂಧಿನಗರದ ತನ್ನ ತಂದೆ ತಾಯಿ ಹಾಗೂ ಅಕ್ಕನಿಗೆ ಆಸರೆಯಾಗಿದ್ದ. ನಿತ್ಯ ಬೆಳಿಗ್ಗೆ ಪತ್ರಿಕೆಗಳನ್ನು ವಿತರಿಸಿ ಬಂದು ನಂತರ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ಮನೆಯವರು ಗೋಳು ಹೇಳತೀರದಾಗಿದೆ.
ಸಂತಾಪ: ಪತ್ರಿಕೆ ವಿತರಕ ಗಣೇಶ್ ಆತ್ಮಕ್ಕೆ ಶಾಂತಿ ಕೋರಿರುವ ತುಂಗಾತರಂಗ ದಿನಪತ್ರಿಕೆ, ಆತನ ಕುಟುಂಭಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲು ವಿನಂತಿಸಿದೆ.
