ಹೊಸದಿಲ್ಲಿ,ಆ.23:
ಕಳೆದ ತಿಂಗಳು ನಿರಂತರವಾಗಿ ಇಂಧನ ಬೆಲೆ ಏರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಚಾಳಿ ಮುಂದುವರೆಸಿದೆ. ಆಗಸ್ಟ್ ಸಹ ಅದೇ ಹೆಚ್ಚಳದಲ್ಲಿ ಸಿಲುಕಿದ್ದು, ಸಾರ್ವಜನಿಕ ಆರೋಪಕ್ಕೆ ಗುರಿಯಾಗಿದೆ.
ಇತ್ತೀಚಿನ ಆರು ದಿನಗಳಿಂದ ಪೆಟ್ರೋಲ್ ಬೆಲೆನಿರಂತರವಾಗಿ ಏರಿಕೆ ಆಗುತ್ತಿದೆ.
ಕಳೆದ ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ ಹೆಚ್ಚಳ ಮಾಡಿತ್ತು. ಆಗಸ್ಟ್ 17ರಂದು 16 ಪೈಸೆ ಹೆಚ್ಚಿಸಲಾಗಿತ್ತು. ಆಗಸ್ಟ್ 18ರಂದು 17 ಪೈಸೆ ಹೆಚ್ಚಳ ಮಾಡಲಾಗಿತ್ತು. ಆಗಸ್ಟ್ 20ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ಪೈಸೆ ಏರಿಕೆ ಮಾಡಲಾಗಿತ್ತು. ಆಗಸ್ಟ್ 21ರಂದು 19 ಪೈಸೆ ಹೆಚ್ಚಿಸಲಾಗಿತ್ತು. ಈಗ ಆಗಸ್ಟ್ 22ರ ನಿನ್ನೆ ಸಹ ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 16 ಪೈಸೆ ಹೆಚ್ಚಳ ಮಾಡಿದೆ. ಇದರಿಂದಾಗಿ ಒಟ್ಟು ಕಳೆದ 6 ದಿನಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 92 ಪೈಸೆಯನ್ನು ಏರಿಕೆ ಮಾಡಿದಂತಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೊಲ್ ಬೆಲೆಯನ್ನು ಏರಿಸುತ್ತಲೇ ಇದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯವನ್ನು ಮರೆತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದೆ. ಇಲ್ಲಿ ಮಾತ್ರ ದುಬಾರಿ ಏಕೆ ಎಂಬುದು ಸಾರ್ವಜನಿಕ ಪ್ರಶ್ನೆ.