ಹೊಳೆಹೊನ್ನೂರು,
ಕುಜದೋಷ’ದ ನೆಪವೊಡ್ಡಿದ ಯುವಕನ ಮನೆಯ ವರು ಪ್ರೇಮ ವಿವಾಹಕ್ಕೆ ನಿರಾಕರಿಸಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್‌ಸ್ಟೆಬಲ್, ತಾಲ್ಲೂಕಿನ ಕಲ್ಲಾಪುರದ ಸುಧಾ (29 ) ಗುರುವಾರ ಮೃತಪಟ್ಟಿದ್ದಾರೆ.


ಭದ್ರಾವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ನೌಕರ, ಬೆಳಗಾವಿಯ ಪ್ರವೀಣ್ ಅವರನ್ನು ಸುಧಾ ೬ ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಹೆತ್ತವರ ವಿರೋಧವಿತ್ತು.


ಆರಂಭದಲ್ಲಿ ಪ್ರೀತಿಗೆ ಜಾತಿ ಅಡ್ಡಿಯಾಗಿದ್ದರೂ ಪ್ರೇಮಿಗಳು ಮದುವೆಗೆ ತಯಾರಿ ನಡೆಸಿದ್ದರು. ಆದರೆ, ಪ್ರವೀಣ್ ಅವರ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದಾಗ, ’ಯುವತಿಗೆ ಕುಜದೋಷವಿದೆ. ಆಕೆಯೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆಯಾಗಲಿದೆ’ ಎಂದು ತಿಳಿಸಿದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ಪ್ರವೀಣ್ ಕಡೆಯವರು ಪಟ್ಟು ಹಿಡಿದಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಮೇ 31 ರಂದು ಭದ್ರಾವತಿ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.


ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸುಧಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಪ್ರವೀಣ್ ವಿಷ ಸೇವಿಸುವ ನಾಟಕ ಮಾಡಿ, ಸುಧಾಳ ಸಾವಿಗೆ ಕಾರಣನಾಗಿದ್ದಾನೆ’ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಈ ಸಂಬಂಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಲ್ಲಾಪುರ ಗ್ರಾಮದಲ್ಲಿ ಸ್ವಾತಂತ್ರ್ಯದ ನಂತರ ಇಬ್ಬರು ಮಾತ್ರ ಸರ್ಕಾರಿ ನೌಕರಿ ಪಡೆದಿದ್ದರು. ಅದರಲ್ಲಿ ಸುಧಾ ಕೂಡ ಒಬ್ಬರು. ಈ ಗ್ರಾಮದ ಪ್ರಥಮ ಮಹಿಳಾ ಸರ್ಕಾರಿ ನೌಕರರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!