ಬರಹ: ಸುಮಾರಾಣಿ.ಕೆ.ಹೆಚ್.
ಶಿವಮೊಗ್ಗ
ಬಹಳ ದಿನಗಳ ನಂತರ ಕನ್ನಡದಲ್ಲಿ ಒಂದು ಒಳ್ಳೆಯ ಚಿತ್ರ ನೋಡಿದೆ. ಕಥೆ,ನಿರ್ದೇಶನ,ಅಭಿನಯ ಎಲ್ಲವೂ ಸೂಪರ್.ಗಟ್ಟಿ ಕಥೆಯೇ ಇಲ್ಲದ ಕೇವಲ ಶ್ರೀಮಂತಿಕೆಯ ಮೇಕಿಂಗ್ ನಿಂದ ಸದ್ದು ಮಾಡುತ್ತಿದ್ದ ಇತ್ತೀಚಿನ ಸಿನಿಮಾಗಳು ಯಾಕೋ ಇಷ್ಟಾನೇ ಆಗ್ತಿರಲಿಲ್ಲ. ಆದರೆ ಚಾರ್ಲಿ ಭಾವನಾತ್ಮಕವಾಗಿ ನಮ್ಮನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶನದ ತಲೆ ಬಿಸಿಯಿಲ್ಲದ್ದರಿಂದಲೋ ಏನೋ ರಕ್ಷಿತ್ ಶೆಟ್ಟಿ ಸಂಪೂರ್ಣವಾಗಿ ಅಭಿನಯದಲ್ಲಿ ತೊಡಗಿಸಿಕೊಂಡು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ್ದಾರೆ. ಯುವ ನಿರ್ದೇಶಕ ಕಿರಣ್ ರಾಜ್ ನಿರ್ದೇಶನ ತುಂಬಾ ಚೆನ್ನಾಗಿದೆ. ರಾಜ್ ಶೆಟ್ಟಿ ಪ್ರಾಣಿಗಳ ಡಾಕ್ಟರ್ ಪಾತ್ರದಲ್ಲಿ ಅದ್ಬುತವಾಗಿ ಅಭಿನಯಿಸಿದ್ದಾರೆ.
ಅವರ ವಿಶಿಷ್ಟ ಮಾತುಗಾರಿಕೆ ನಗೆಯುಕ್ಕಿಸುತ್ತವೆ.ನಾಯಕಿ ಸಂಗೀತ ಶೃಂಗೇರಿ ಭರವಸೆ ಮೂಡಿಸಿದ್ದಾರೆ.
ಇನ್ನೂ ಮುಖ್ಯ ಪಾತ್ರಧಾರಿ ಚಾರ್ಲಿಯ ಅಭಿನಯ ಮನಸ್ಸಿಗೆ ನಾಟುವಂತಿದೆ. ಪ್ರಾಣಿಪ್ರಿಯರು ನೋಡಲೇಬೇಕಾದ ಚಿತ್ರ. ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧವನ್ನು ತೋರಿಸಿರುವ ಸಿನಿಮಾ ಬಹುಶಃ ಕನ್ನಡದಲ್ಲಿ ಮಾತ್ರವಲ್ಲ ಭಾರತದ ಬೇರಾವುದೇ ಬಾಷೆಯಲ್ಲೂ ಬಂದಿರಲಿಲ್ಲವೆಂದು ಕಾಣುತ್ತೆ.
ನಮ್ಮಮನೆಯಲ್ಲಿ ಸ್ಕೂಬಿ ಎಂಬ ಲ್ಯಾಬ್ರಡಾರ್ ನಾಯಿ ಇತ್ತು….ನಾವು 2004 ರಲ್ಲಿ ಮನೆ ಕಟ್ಟಿದಾಗ ನನ್ನ ಯಜಮಾನರ ಗೆಳೆಯರೊಬ್ಬರು ಅದನ್ನು ಕೊಡುಗೆಯಾಗಿ ನೀಡಿದ್ದರು. ಆಗ ಅದು 40 ದಿನದ ಮರಿ….ಬಿಳಿಯ ಬಣ್ಣದ ತುಂಬಾ ಮುದ್ದಾದ ಮರಿ.
ನನ್ನ ಮಗ ಆಗ 5 ನೇ ತರಗತಿಯಲ್ಲಿ ಓದುತ್ತಿದ್ದ.
ಅದನ್ನು ಎಲ್ಲರೂ ತುಂಬಾ ಹಚ್ಚಿಕೊಂಡಿದ್ದೆವು.ನನ್ನ ಮಗನಂತೂ ಅದನ್ನು ತಮ್ಮ ಎಂದೇ ಭಾವಿಸಿದ್ದ.ಅವನು ಓದ್ತಾ ಇದ್ರೆ ಯಾವಗಲೂ ಅವನ ರೂಮಿನಲ್ಲಿ ಅವನ ಕಾಲ ಬಳಿಯೇ ಕೂರುತ್ತಿತ್ತು.
ನಮ್ಮ ಹಾಗೇ ಅದು ಶುದ್ಧ ಸಸ್ಯಹಾರಿಯಾಗಿ ಬೆಳೆಯಿತು. ಬೆಂಡೆಕಾಯಿ ಕಲ್ಲಂಗಡಿ ಪಪ್ಪಾಯ ಅಂದ್ರೆ ತುಂಬಾ ಇಷ್ಟ. ಬೆಳಗ್ಗೆ ವಾಕ್ ಕರೆದುಕೊಂಡು ಹೋಗುವುದು ಊಟ ಹಾಕುವುದು ಹೆಚ್ಚಾಗಿ ನಾನೇ ಮಾಡುತ್ತಿದ್ದೆ. ಸ್ನಾನ ಮಾತ್ರ ಮಗ ಮತ್ತು ಯಜಮಾನರು ಮಾಡಿಸುತ್ತಿದ್ದರು.ತುಂಬಾ ವಿದೇಯ ನಾಯಿ ಹೇಳಿದ ಮಾತೆಲ್ಲ ಕೇಳುತ್ತಿತ್ತು ಮಕ್ಕಳನ್ನು ಕಂಡ್ರೆ ತುಂಬಾ ಪ್ರೀತಿ.
ನನ್ನ ಮಗನಿಗೆ ಅದರ ಎದುರು ಬಯ್ಯುವ ಹಾಗಿರಲಿಲ್ಲ ನಮಗೆ ಬೊಗಳಿ ಜೋರು ಮಾಡುತ್ತಿತ್ತು. ಮನೆಯ ಸದಸ್ಯನಂತೆ 9 ವರ್ಷಗಳ ಕಾಲ ಇತ್ತು.
9 ನೇ ವರ್ಷದಲ್ಲಿ ತುಂಬಾ ಹುಷಾರಿಲ್ಲದ ಹಾಗಾಗೋದು ಶುರು ಆಯ್ತು.
ಚಾರ್ಲಿಯ ತರವೇ ಅದಕ್ಕೂ ಕ್ಯಾನ್ಸರ್ ಆಗಿತ್ತು . ಪದೇ ಪದೇ ಜ್ವರ ಬರ್ತಿತ್ತು. ಹೀಗೆ ಒಮ್ಮೆ ಹುಷಾರಿಲ್ಲದೆ ಒಂದು ವಾರ ಆಸ್ಪತ್ರೆಗೆ ನಾನೇ ಕರೆದುಕೊಂಡು ಹೋಗುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾದ. ಮತ್ತೆ ಸ್ವಲ್ಪ ದಿನದಲ್ಲೇ ಮೈಮೇಲೆಲ್ಲಾ ಗಾಯಗಳಾಗೋಕೆ ಶುರು ಆಯ್ತೂ. ಮಲಗಿದಲ್ಲೇ ಇರಲು ಶುರು ಮಾಡಿದ. ಗಾಯಗಳು ಇನಫೆಕ್ಷನ್ ಆಗಿ ಹುಳುಗಳಾಗೋಕೆ ಶುರು ಆದವು. ದಿನಾ ಕ್ಲೀನ್ ಮಾಡಿ powdrer ಹಾಕುತಿದ್ದೆವು.
ನಾನು ಭಜನಾ ಮಂಡಳಿಯ ಗೆಳತಿಯರ ಜೊತೆ ತಮಿಳುನಾಡು ಟೂರ್ ಹೋಗಿದ್ದೆ.ನಾನು ವಾಪಸ್ ಬರುವುದರೊಳಗೆ ಅವನು ಇರಲಿಲ್ಲ. ಯಜಮಾನರು ಊಟ ಹಾಕಲು ಹೋದಾಗ ಹಾಗೇ ದಿಟ್ಟಿಸಿ ನೋಡ್ತಾ ಇದ್ನಂತೆ ಇದ್ದಕ್ಕಿದ್ದ ಹಾಗೆ ಬಿದ್ದು ಬಿಟ್ಟಿದ್ದಾನೆ ನಂತರ ಉಸಿರು ನಿಂತು ಹೋಗಿದೆ. ತೋಟಕ್ಕೆ ತೆಗೆದುಕೊಂಡು ಹೋಗಿ ಮಣ್ಣು ಮಾಡಿ ಬಂದಿದ್ದಾರೆ. ಅದರ ಇಲ್ಲದಿರುವಿಕೆಯನ್ನು ಮರೆಯಲು ಬಹಳಷ್ಟು ಸಮಯ ಬೇಕಾಯಿತು. ನಾಯಿಗಳ ಆಯಸ್ಸು ಕಡಿಮೆಯಾದ್ದರಿಂದ ಅವು ತೀರಿಕೊಂಡಾಗ ಮನಸ್ಸಿಗೆ ಬಹಳ ನೋವಾಗುತ್ತದೆ. ಯಾಕಾದ್ರೂ ಅಷ್ಟು ಹಚ್ಚಿಕೊಂಡೆವೋ ಅನ್ನಿಸುತ್ತದೆ.
ಚಾರ್ಲಿ ಸಿನಿಮಾದುದ್ದಕ್ಕೂ ಸ್ಕೂಭಿಯೇ ಕಣ್ಣ ಮುಂದೆ ಬರುತ್ತಿದ್ದ. ಚಾರ್ಲಿ ಶತದಿನೋತ್ಸವ ಆಚರಿಸಲಿ.