ನಾಳೆ ತಾಯಂದಿರ ದಿನ, ಹೆತ್ತಮ್ಮನನ್ನ ಎಷ್ಟೆ ಗೋಳು ಹೊಯ್ದುಕೊಂಡರೂ ಅವಳಿಲ್ಲದ ಕ್ಷಣ ಆಕೆಗಾಗಿ ಮರುಗುವ ಪ್ರತಿ ಮನಸ್ಸಿಗೂ ಅಮ್ಮನೆನ್ನುನ್ನುವ ದೇವರ ಎದೆಯಾಳದ ಪ್ರೀತಿಯ ಬಗ್ಗೆ ಪ್ರಶ್ನೆಗಳೇ ಇರೋದಿಲ್ಲ. ತಾಯಿಗಿಂತ ದೇವರಿಲ್ಲ, ಆದರೆ ದೇವರೂ ಕೂಡ ತಾಯಿಯಾಗಲಾರ! ನಿಸರ್ಗದಷ್ಟೆ ನಿಸ್ವಾರ್ಥಳಾದ ತಾಯಿಯನ್ನ, ಆಕೆಯ ಕರಳುಬಳ್ಳಿಯ ಸಂಬಂಧವನ್ನ ಭಾವನಾತ್ಮಕವಾಗಿ ವ್ಯಕ್ತಪಡಿಸಿ, ಅಪರಾಧಿ ಬದುಕಿನಿಂದ ಹೊರತರುವ ಪ್ರಯತ್ನವೊಂದಕ್ಕೆ ಕೈ ಹಾಕಿದೆ ಕೇಂದ್ರ ಕಾರಾಗೃಹ ಶಿವಮೊಗ್ಗ ಹಾಗೂ ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗ.
ನಾಳೆ ವಿಶ್ವ ತಾಯಂದಿರ ದಿನದ ಅಂಗವಾಗಿ ಕೇಂದ್ರ ಕಾರಾಗೃಹದಲ್ಲಿ ನಮ್ಮವರು, ನಮ್ಮವರಿಗಾಗಿ, ನಮ್ಮವರಿಗೋಸ್ಕರ ಎಂಬ ಟ್ಯಾಗ್​ಲೈನ್​ ನಡಿಯಲ್ಲಿ ತಾಯಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜೊತೆಗೆ ಒಂದಿಷ್ಟು ಕಾನೂನಿನ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ. ನಾಳೆ ಬೆಳಗ್ಗೆ 10.30 ಕ್ಕೆ , ಕೇಂದ್ರ ಕಾರಾಗೃಹದ ಒಳ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.


ಅಂದಹಾಗೆ, ಕಾರ್ಯಕ್ರಮೆಂದರೆ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಂತೆ ಯೋಚಿಸಬೇಕಿಲ್ಲ. ನಾಳೇ ಕೇಂದ್ರ ಕಾರಾಗೃಹದಲ್ಲಿ ನಡೆಯಲಿರುವುದು, ಒಂದು ವಿಶಿಷ್ಟ ಕಾರ್ಯಕ್ರಮ, ಯಾವುದೋ ಕೆಟ್ಟ ಸನ್ನಿವೇಶದಲ್ಲಿ ಯಾವುದೋ ಒಂದು ಅಪರಾಧ ನಡೆಸಿ, ಅದಕ್ಕಾಗಿ ಶಿಕ್ಷೆ ಅನುಭವಿಸುವ ಜೈಲು ಹಕ್ಕಿಗಳಲ್ಲಿ ಅವರದ್ದೇ ಆದ ನೋವುಗಳಿವೆ. ಅಲ್ಲಿ ಪ್ರತಿಯೊಬ್ಬರದ್ದು ಒಂದೊಂದು ಮರುಕದ ಕಥೆಗಳಿವೆ. ತಮ್ಮ ತಾಯಂದಿರನ್ನ ನೆನಸಿಕೊಂಡು ಕಣ್ಣೀರಿಡುವ ಯಾತನೆಗಳಿವೆ. ಅಂತಹವರ ಭಾವಭಾರವನ್ನು ತುಸು ಕಡಿಮೆ ಮಾಡುವ ಸಲುವಾಗಿ, ನಾಳೆ ಆಯ್ದ ಕೈದಿಗಳ ತಾಯಂದಿರು ಹಾಗೂ ಸಂಬಂಧಿಕರನ್ನ ಕೇಂದ್ರ ಕಾರಾಗೃಹಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಆ ಕೈದಿಗಳಿಗೆ ಈ ವಿಚಾರವೇ ಗೊತ್ತಿಲ್ಲ ಎನ್ನುವುದೇ ವಿಶೇಷ .

ಒಬ್ಬಾತ ಜೈಲು ಸೇರಿದ ನಂತರ ಮೂರು ನಾಲ್ಕು ವರ್ಷಗಳಿಂದ ತನ್ನ ತಾಯಿಯನ್ನ ನೋಡಿಲ್ಲ. ಮತ್ತೊಬ್ಬಾತ ಜೈಲಿನಲ್ಲಿರೋ ವಿಚಾರವೇ ಆ ತಾಯಿಗೆ ಗೊತ್ತಿಲ್ಲ. ಹೀಗೆ ಜೈಲಿನಲ್ಲಿ ತಾಯಿ ಮಕ್ಕಳ ಸಮ್ಮಿಲನಕ್ಕೆ ಕೇಂದ್ರ ಕಾರಾಗೃಹ ವೇದಿಕೆಯಾಗುತ್ತಿದೆ. ಈ ಮೂಲಕ ಉಳಿದ ಕೈದಿಗಳ ಮನಪರಿವರ್ತನೆಗೆ ಪ್ರಯತ್ನಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ತಾಯಂದಿರಿಗೆ ಸಂಬಂಧಿಸಿದ ವಿವಿಧ ರೀತಿಯ ಸ್ಕಿಟ್​ಗಳು ನಾಳಿನ ಕಾರ್ಯಕ್ರಮಕ್ಕಾಗಿ ಸಿದ್ದವಾಗಿದೆ. 10 ಕೈದಿಗಳು 10 ರೀತಿಯ ಕಾರ್ಯಕ್ರಮಗಳಲ್ಲಿ ತಾಯಂದಿರ ಬಗೆಗಿನ ತಮ್ಮ ಭಾವನೆಗಳನ್ನ ವ್ಯಕ್ತಪಡಿಸಲಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಎದೆ ಹಾಲು ಕುಡಿದರೋ ಎಂಬುವುದರಿಂದ ಹಿಡಿದು, ಏಳು ಮಲೇ ಮ್ಯಾಲೇರಿ ಬಂದನವ್ಬ ಮಾದೇವ ಎಂಬ ಜೋಗಿಯ ಪಾತ್ರವನ್ನು ಕೈದಿಗಳು ನಿರ್ವಹಿಸುತ್ತಿದ್ದು, ಅಮ್ಮ-ಮಗನ ಸಂಬಂಧವನ್ನು ಕಟ್ಟಿಕೊಡಲಿದ್ದಾರೆ. ಇದಷ್ಟೆ ಅಲ್ಲದೆ ಗಣಪತಿ ಕಥೆ, ಜಮದಗ್ನಿ ಕಥೆಗಳನ್ನ ಕೈದಿಗಳು ಪ್ರಸ್ತುತ ಪಡಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಆಯ್ದ ಕೈದಿಗಳ ಪೋಷಕರು, ಅವರ ಮುಂದೆ ಕಾಣಿಸಿಕೊಳ್ಳಲಿದ್ದು, ವರ್ಷಗಳ ಬಂಧನದ ನಂತರ ಕಾಣ ಸಿಗುವ ತಾಯಿ ಹಾಗೂ ಪೋಷಕರ ಎದುರು ಕೈದಿಯೊಬ್ಬ ಮಗುವಾಗುವ ಸನ್ನಿವೇಶ ಸಹಜವಾಗಿಯೇ ಎದುರುಗೊಳ್ಳಲಿದೆ.


ಇದಷ್ಟೆ ಅಲ್ಲದೆ ಕೇಂದ್ರ ಕಾರಾಗೃಹದಲ್ಲಿರುವ ಸುಮಾರು ಆರುನೂರು ಕೈದಿಗಳು ತಮ್ಮ ಜೀವನದಲ್ಲಿ ಈ ಮೊದಲೆ ನೋಡಿದಂತಹ ಕೋರ್ಟ್​ನ ಕಲಾಪವನ್ನು, ದೃಶ್ಯ ರೂಪಕದಲ್ಲಿ ಮತ್ತೊಮ್ಮೆ ವೀಕ್ಷಿಸಲಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪ್ರೆಸ್​ ಟ್ರಸ್ಟ್​ ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇಂದ್ರ ಕಾರಾಗೃಹ ಮತ್ತು ಮಹಿಳಾ ಕೇಂದ್ರ ಕಾರಾಗೃಹದ ವತಿಯಿಂದ ಇಂತಹದ್ದೊಂದು ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ತಾಯಂದಿರ ಸಂಭ್ರಮದಲ್ಲಿ ಚ್ಯುತಿ ಬರದಂತೆ, ಅಚ್ಚುಕಟ್ಟಾಗಿ ಎಲ್ಲವನ್ನು ಖದ್ದು ಆಸಕ್ತಿಯಿಂದ ಶಿಕ್ಷಕಿ ಲೀಲಾ ಎಸ್​.ಎನ್​ ಉಸ್ತುವಾರಿ ನಿಭಾಯಿಸುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ, ಇಡೀ ರಾಜ್ಯದಲ್ಲಿಯೇ ಇಂತಹದ್ದೊಂದು ಕಾರ್ಯಕ್ರಮ ನಡೆಯುತ್ತಿರುವುದು ಇದೇ ಪ್ರಪ್ರಥಮ..
ಕೇಂದ್ರ ಕಾರಾಗೃಹದ ಅಧೀಕ್ಷಕ ಮಹದೇವ ನಾಯ್ಕ್​ರವರ ಆಸಕ್ತಿ ಮತ್ತು ಪ್ರೋತ್ಸಾಹ ಹಾಗೂ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ , ನ್ಯಾ.ರಾಜಣ್ಣ ಸಂಕಣ್ಣನವರ. ಹಿರಿಯ ಸಿವಿಲ್ ನ್ಯಾಯಾಧೀಶರು, ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ನಿರ್ದೇಶಕ ಷಫಿಯವರು, ಡಿಎಚ್​ಒ ರಾಜೇಶ್​ ಸುರಗಿಹಳ್ಳಿ, ಶಿವಮೊಗ್ಗ ಪ್ರೆಸ್​ ಟ್ರಸ್ಟ್​ನ ಮಂಜುನಾಥ್​ರವರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಎಸ್​ ಹಿರೇಮನಿ, ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯಕ್ರಮ ಸಂಯೋಜಕರು ಹೆಚ್​.ಎಸ್​ ಪಾಟೀಲ್​, ಕುವೆಂಪು ವಿವಿಯ ಪ್ರೊಫೆಸರ್ ಹೆಚ್​.ಕೆ ಹಸೀನಾರವರು ಹಾಗೂ ರಂಜಿನಿ ದತ್ತಾತ್ರಿಯವರು ಪಾಲ್ಗೊಳ್ಳಲಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!