ಶಿವಮೊಗ್ಗ, ಆ.18: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11ಕಡೆ ಒಟ್ಟು 40ಎಕ್ರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಸ್ಥಳ ಗುರುತಿಸಲಾಗಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ 10ದಿನಗಳ ಅವಧಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಬಹುದಾದ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ 11ಸ್ಥಳಗಳನ್ನು ಗುರುತಿಸಲಾಗಿದೆ. ಗೋಪಾಲ ಗೌಡ ಎಕ್ಸ್‍ಟೆನ್ಸ್‍ನ್ ಪಾರ್ಕ್, ಸೋಮಿನಕೊಪ್ಪ ಪಾರ್ಕ್ ಶಾರದಮ್ಮ ಲೇಔಟ್ (ಮೈತ್ರಿ ಹಾಸ್ಟೆಲ್ ಹಿಂಭಾಗ), ಹೆಚ್‍ಟಿ ಲೈನ್ ಕಾರಿಡಾರ್ ದ್ರೌಪದಮ್ಮ ಸರ್ಕಲ್ ಬಳಿ, ವಿನೋಭಾನಗರ ಪಾರ್ಕ್ ಇಂದಿರಾ ಕ್ಯಾಂಟೀನ್ ಬಳಿ ಮತ್ತು ಸಮುದಾಯ ಭವನ ಬಳಿ, 60ಅಡಿ ರಸ್ತೆ(9ಆರ್‍ಎಂಸಿ ಯಾರ್ಡ್ ಕಂಪೌಂಡ್), ಎಸ್‍ಟಿಪಿ ತ್ಯಾವರಚಟ್ನಳ್ಳಿ, ವಾಜಪೇಯಿ ಲೇಔಟ್ (ಮೀಸಲು ಅರಣ್ಯ), ರಾಗಿಗುಡ್ಡ ಮತ್ತು ವಿದ್ಯಾನಗರ ಜ್ಞಾನವಿಹಾರ ಎಕ್ಸ್‍ಟೆನ್ಸ್‍ನ್ ನಲ್ಲಿ ಭೂಮಿ ಗುರುತಿಸಲಾಗಿದೆ ಎಂದು ಹೇಳಿದರು.

ಮಿಯಾವಕಿ ಮಾದರಿ ಅರಣ್ಯ ಅಭಿವೃದ್ಧಿ: ನಗರ ಅರಣ್ಯೀಕರಣಕ್ಕೆ ಪ್ರಸಿದ್ಧ ಮಾದರಿಯಾಗಿರುವ ಮಿಯಾವಕಿ ಮಾದರಿಯನ್ನು ಕೆಲವು ಕಡೆಗಳಲ್ಲಿ ಅನುಷ್ಟಾನಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜಪಾನಿನ ಮಿಯಾವಕಿ ಮಾದರಿಯಲ್ಲಿ ಅತಿ ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯವನ್ನು ಬಹಳ ಬೇಗನೆ ಬೆಳೆಸಬಹುದಾಗಿದೆ. ಇದರ ಸಾಧ್ಯತೆಯನ್ನು ಪರಿಶೀಲಿಸುವಂತೆ ಅವರು ಸೂಚನೆ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಹಸಿರೀಕರಣಕ್ಕೆ 3.81ಕೋಟಿ ರೂ. ನಿಗದಿಪಡಿಸಲಾಗಿದೆ. ಸಸಿಗಳ ನೆಡುವುದು ಹಾಗೂ ಐದು ವರ್ಷಗಳ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆದಷ್ಟು ಬೇಗನೆ ಆರಂಭಿಸಬೇಕು. ಶಿವಮೊಗ್ಗ ನಗರದಲ್ಲಿ ಕನಿಷ್ಟ 7ಸಾವಿರ ಸಸಿಗಳನ್ನು ನೆಡುವ ಯೋಜನೆ ಇದಾಗಿದ್ದು, ಶಿವಮೊಗ್ಗ ನಗರದ ಹಸಿರೀಕರಣದಲ್ಲಿ ಮಹತ್ವದ ಹೆಜ್ಜೆ ಇದಾಗಲಿದೆ ಎಂದು ಅವರು ಹೇಳಿದರು.

ವೈವಿಧ್ಯಮಯ ಸಸಿಗಳ ಆಯ್ಕೆ: ಹೂವಿನ ಮರಗಳು, ಗಿಡಗಳು, ಅರಳಿ, ಬೇವು, ರಂಜಲು, ಬನ್ನಿ, ಬಿಲ್ವಪತ್ರೆ, ಮದ್ದಾಲೆ, ಔಷಧಿ ಗಿಡಗಳು, ಅತ್ತಿ, ಸಿಹಿ ಹುಣಸೆ, ಹೊಳೆ ಮತ್ತಿ, ತಾರೆ, ಹೆಬ್ಬಿದಿರು, ಕಿರುಬಿದಿರು, ಪೈಕಸ್ ಮರಗಳು, ಮಿಯಾವಕಿ ಮಾದರಿ ಅರಣ್ಯಕ್ಕೆ ಪೂರಕವಾದ ಸಸಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಅಧಿಕಾರಿಗಳು ಹಾಗೂ ಪರಿಸರಾಸಕ್ತರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!