ಭದ್ರಾವತಿ,
ಹಿಂದೂ ಸಂಸ್ಕೃತಿಯ ಮೇಲೆ ಹಾಕಿರುವ ಪರದೆಯನ್ನು ಸರಿಪಡಿಸುವ ಕೆಲಸ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಶ್ರೀ ಸಮುದಾಯ ಭವನದ ಮುಂದುವರಿದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದ ಮೇಲೆ ನಡೆದಿದ್ದ ನಿರಂತರ ದಾಳಿಯನ್ನು ಸರಿಪಡಿಸುವ ಕೆಲಸ ಈಗ ನಡೆದಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪ ಮಾಡುವ ಮೂಲಕ ಕೆಲಸ ನಡೆದಿದೆ. ಇದೆಲ್ಲವೂ ಹಲವು ವರ್ಷಗಳ ನಿರಂತರ ಹೋರಾಟದ ಫಲ ಎಂದರು.
’ಎಲ್ಲಾ ರಂಗದಲ್ಲೂ ಆಗಿರುವ ವ್ಯವಸ್ಥಿತ ಪಿತೂರಿ ಹೊರತೆಗೆಯುವ ಕೆಲಸ ನಡೆದಿದೆ. ಇದಕ್ಕೆ ಮತ್ತಷ್ಟು ಕಾಲ ಬೇಕಿದೆ. ಅನೇಕ ಹಿರಿಕರ, ಪರಿವಾರದ ಕನಸನ್ನು ಈಡೇರಿಸುವ ಕೆಲಸ ನಡೆದಿದ್ದು, ಇದಕ್ಕೆ ಕೋಮುಬಣ್ಣ ಹಚ್ಚುವ ಕೆಲಸ ವಿರೋಧ ಪಕ್ಷಗಳಿಂದ ನಡೆದಿದೆ’ ಎಂದರು.
ನಿರಂತರ ಕೆಲಸ: ’ಹಿಂದೂ ಸಮಾಜವನ್ನು ಕಟ್ಟುವ ಕೆಲಸ ನಿರಂತರವಾಗಿ ಸಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ವಿರೋಧಿಗಳು ಪ್ರತಿ ಸಂದರ್ಭದಲ್ಲೂ ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ನಮ್ಮ ಸಾಂಸ್ಕೃತಿಕ ಬದ್ಧತೆಗೆ ಧಕ್ಕೆ ಮಾಡುವ ಕೆಲಸ ನಡೆಸಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಹೇಳಿದರು.
ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ’ವಿಶ್ವ ಹಿಂದೂ ಪರಿಷತ್ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುವ ಮೂಲಕ ಬಡವರ ಪಾಲಿಗೆ ನೆರವಾಗಿದೆ. ೩೮ ವರ್ಷಗಳಲ್ಲಿ ೭೦೦ಕ್ಕೂ ಹೆಚ್ಚು ವಿವಾಹಗಳನ್ನು ನೆರವೇರಿಸಿರುವುದು ಶ್ಲಾಘನೀಯ’ ಎಂದರು.
ನಗರಸಭೆ ಅಧ್ಯಕ್ಷೆ ಗೀತಾರಾಜಕುಮಾರ್ ಮಾತನಾಡಿ, ’ಸಮಾಜ ಕಟ್ಟುವ ಕೆಲಸ ಮಾಡುವುದು ಬಹಳಷ್ಟು ಕಷ್ಟಕರ. ಆದರೂ ಇಲ್ಲಿರುವ ಹಿರಿಕರು ಕಷ್ಟಪಟ್ಟು ಮಾಡುತ್ತಿರುವ ಈ ಸೇವೆ ಮೆಚ್ಚುವಂತಹುದು. ಇದಕ್ಕೆ ಅವಶ್ಯ ಇರುವ ನೆರವನ್ನು ಒದಗಿಸಲು ಸಿದ್ಧರಿದ್ದೇವೆ’ ಎಂದು ಹೇಳಿದರು.
ಡಾ.ನರೇಂದ್ರಭಟ್, ಹಾ.ರಾಮಪ್ಪ, ಕೇಶವಹೆಗ್ಡೆ, ವಾಸುದೇವಮೂರ್ತಿ, ಎಸ್.ಮುತ್ತು ರಾಮಲಿಂಗಮ್, ಯಶೋಧ ವೀರಭದ್ರಪ್ಪ, ಕೆ.ಎಚ್. ತೀರ್ಥಯ್ಯ, ವೇದಾವತಿ ಶಿವಮೂರ್ತಿ, ಆರ್. ಪೂರ್ವಾಚಾರ್, ಡಿ.ಆರ್. ಶಿವಕುಮಾರ್, ವೈ.ಎಸ್. ರಾಮಮೂರ್ತಿ, ಮಂಜುನಾಥ ಪವಾರ್, ಎನ್.ಎಸ್. ಮಹೇಶ್ವರಪ್ಪ, ಡಾ.ಬಿ.ಜಿ. ಧನಂಜಯ ಅವರೂ ಉಪಸ್ಥಿತರಿದ್ದರು.