ಶಿವಮೊಗ್ಗ, ಮೇ.೧೯:
ಸೇವೆಯನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾಸಂಘ, ಪಾಲಿಕೆಯ ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿ ವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸುರಿಯುವ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಗ್ರಹಿಸಿ ಪೌರಕಾರ್ಮಿಕರು ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪೌರಕಾರ್ಮಿಕರ ಸ್ಥಿತಿ ತುಂಬಾ ಹೀನಾಯವಾಗಿದೆ. ನಮ್ಮ ಕಷ್ಟಗಳನ್ನು ಕೇಳುವವರೇ ಇಲ್ಲವಾಗಿದೆ. ಕಳೆದ ೨೫ ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ನಾವು ತೊಡಗಿದ್ದೇವೆ. ಜೀತ ಪದ್ಧತಿಗಿಂತ ನಮ್ಮನ್ನು ಕಡೆಗಣಿಸಲಾಗಿದೆ. ಕೆಲಸಕ್ಕೆ ತಕ್ಕಂತೆ ವೇತನವೂ ಇಲ್ಲ. ಜೀವನ ಭದ್ರತೆಯೂ ಇಲ್ಲ. ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ಎಲ್ಲ ನೋವುಗಳನ್ನು ಇಟ್ಟುಕೊಂಡು ನಮ್ಮನ್ನು ಖಾಯಂ ಮಾಡಬೇಕೆಂದು ಪ್ರತಿಭ ಟನಾಕಾರರರು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇತನ ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ ವಾಹನ ಚಾಲಕರು, ಲೋಡರ್ಸ್ ನೌಕರರು, ಒಳಚರಂಡಿ ವಿಭಾಗದ ನೌಕರರು, ಚಾಲಕರ ಹೆಲ್ಪರ‍್ಗಳು, ಶಿಕಾರಿಪುರ, ಭದ್ರಾವತಿ, ಶಿರಾಳಕೊಪ್ಪ, ಸಾಗರ, ಸೊರಬ, ಕಾರ್ಗಲ್, ಜೋಗ ಮುಂತಾದ ವಿವಿಧೆಡೆಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ. ಪೆಂಚಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್, ಜಿಲ್ಲಾ ಉಪಾಧ್ಯಕ್ಷ ಸಿ. ನಾಗರಾಜ್, ಖಜಾಂಚಿ ಎಂ. ನರಸಿಂಹಮೂರ್ತಿ ಮತ್ತಿತರರು ವಹಿಸಿದ್ದರು.