ಸಾಗರ:

 ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯ ಅವರ ಕ್ರಮ ಖಂಡನೀಯ. ಪಕ್ಷದ ವರಿಷ್ಠರು ರಮ್ಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ D.K ಶಿವಕುಮಾರ್ ಜನ್ಮದಿನದ ಪ್ರಯುಕ್ತ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಹಣ್ಣುಬ್ರೆಡ್ ವಿತರಣೆ ಮಾಡಿ ಅವರು ಮಾತನಾಡಿ, ಡಿಕೆಶಿ ಅವರ ವಿರುದ್ಧ ಟೀಕೆ ಮಾಡುವಾಗ ಯಾರೇ ಆದರೂ ಎಚ್ಚರಿಕೆಯಿಂದ ಇರಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಾಗಿಲು ಇಲ್ಲ. ಕಾಂಗ್ರೆಸ್‌ನಲ್ಲಿರುವುದು ಒಂದೇ ಬಾಗಿಲು ಆಗಿದ್ದು, 2023 ರ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ಮತ್ತು ಆಯ್ಕೆಯಾಗಿ ಬಂದ ಶಾಸಕರು ತೀರ್ಮಾನಿಸುತ್ತಾರೆ. ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಡಾ. ಪರಮೇಶ್ವರ್ ಇನ್ನಿತರರ ಬಣ ಇದೆ ಎನ್ನುವುದು ಬಿಜೆಪಿ ಕಟ್ಟುಕಥೆಯಾಗಿದೆ. ಕಾಂಗ್ರೆಸ್‌ಗಿಂತ ಬಿಜೆಪಿಯಲ್ಲಿಯೇ ಹೆಚ್ಚು ಒಳಬಣಗಳಿವೆ ಎಂದು ಹೇಳಿದರು.

ಡಿಕೆಶಿ ಕಾಂಗ್ರೆಸ್ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತರಬೇಕು ಎನ್ನುವ ಏಕೈಕ ಉದ್ದೇಶದಿಂದ ಹಗಲುರಾತ್ರಿ ಪಕ್ಷ ಸಂಘಟನೆಗೆ ಅವರು ಒತ್ತು ನೀಡುತ್ತಿದ್ದಾರೆ. ಅವರ ಸಂಘಟನಾಶಕ್ತಿ ಇನ್ನಷ್ಟು ಗಟ್ಟಿಗೊಳ್ಳಲಿ ಎನ್ನುವುದು ನಮ್ಮೆಲ್ಲರ ಹಾರೈಕೆ. ಈ ಹಿನ್ನೆಲೆಯಲ್ಲಿ ಅಭಿಮಾನಿ ಬಳಗದಿಂದ ರೋಗಿಗಳಿಗೆ ಹಣ್ಣುಬ್ರೆಡ್ ವಿತರಣೆ ಮಾಡುವ ಮೂಲಕ ಅವರ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಹೇಳಿದರು.

ನಗರಸಭೆ ವಿಪಕ್ಷ ನಾಯಕ ಮಂಡಗಳಲೆ ಗಣಪತಿ, ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಶ್ರೀಕಾಂತ್ ಕುರುವರಿ, ಉಪಾಧ್ಯಕ್ಷ ಸಂದೀಪ್ ಲ್ಯಾವಿಗೆರೆ, ಪ್ರಧಾನ ಕಾರ್ಯದರ್ಶಿ ಮೇಘರಾಜ್ ಗೌತಮಪುರ, ಕಾರ‍್ಯಾಧ್ಯಕ್ಷ ನಾಗೇಶ್ ನೇರಲಗಿ, ಖಜಾಂಚಿ ಮಹೇಶ್, ಪ್ರಮುಖರಾದ ರೇಖಾ ಕೃಷ್ಣಮೂರ್ತಿ, ನಯನ, ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!