ಶಿವಮೊಗ್ಗ, ಮೇ14:
ದೇಶ ಗಟ್ಟಿಯಾಗಬೇಕಾದರೇ ಎಲ್ಲಾ ಸಮುದಾಯ ಗಳು ಬಲಿಷ್ಠವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕರೆ ನೀಡಿದರು.
ನಗರದ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್-೨೦೨೨ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಕ್ರಿಕೆಟ್ ಭಾವನಾತ್ಮಕ ಕ್ರೀಡೆಯಾಗಿದೆ. ಇಂತಹ ಕ್ರೀಡೆ ಸಂಘಟನೆ, ಸಮುದಾಯದ ಹಂತದಲ್ಲಿ ರೂಪುಗೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿ. ಈ ಪ್ರಯತ್ನ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ’ದೈನಂದಿನ ದಿನಚರಿಯಲ್ಲಿ ನಾವೆಲ್ಲರೂ ಆಟ ಆಡುವುದನ್ನೆ ಮರೆತುಬಿಟ್ಟಿದ್ದೇವೆ. ಪ್ರತಿಯೊಬ್ಬರೂ ಕ್ರೀಡೆ, ವ್ಯಾಯಾಮ, ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು’ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಹಾಗಾಗಿ ಯಾರೊಬ್ಬರೂ ಗೆದ್ದಾಗ ಬೀಗದೇ, ಸೋತಾಗ ಕುಗ್ಗದೇ ಸಮಚಿತ್ತದಿಂದ ಮುನ್ನಡೆಯಬೇಕು. ಕ್ರೀಡಾ ಮನೋಭಾ ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಭೋವಿ ಸಮಾಜ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಭೋವಿ ಯುವ ಘಟಕದ ಅಧ್ಯಕ್ಷ ಸಂತೋಷ್ ಹೊಳಲೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರವಿಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಜಗದೀಶ್, ತಿಮ್ಮರಾಜು, ರಮೇಶ್, ಭೀರಪ್ಪ, ಬಸವರಾಜು, ಗಿರೀಶ್, ಈಶ್ವರಪ್ಪ, ಮಂಜುನಾಥ್, ಕಾಶಿನಾಥ್, ಲೋಕೇಶ್, ಮತ್ತಿತರರು ಇದ್ದರು.