ಶಿವಮೊಗ್ಗ, ಮೇ೦೯:
ನೋನಿ ಹಣ್ಣಿನಿಂದ ತಯಾರಾಗುವ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತಿರುವ ಕಾರಣಕ್ಕೇ ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಉತ್ಪಾದಿಸುತ್ತಿರುವ ನೋನಿ ಉತ್ಪನ್ನಗಳಿಗೆ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಉತ್ತಮ ಬೇಡಿಕೆ ಸೃಷ್ಠಿಯಾಗಿದೆ ಎಂದು ಉದ್ಯಮಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಭಿಪ್ರಾಯಪಟ್ಟರು.
ಭಾನುವಾರ ಸಮೀಪದ ರಾಮಿನಕೊಪ್ಪ ಗ್ರಾಮದಲ್ಲಿರುವ ಸಂಸ್ಥೆ ಆವರಣದಲ್ಲಿ ಆಯೋ ಜಿಸಲಾಗಿದ್ದ ಸಂಸ್ಥೆಯ ೧೩ನೇ ಅಮೃತೋತ್ಸವ, ಮೂರನೇ ಬೃಹತ್ ಕೈಗಾರಿಕಾ ಘಟಕದ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಿ ಬಳಿಕ ಅವರು ಮಾತನಾಡಿದರು.
ನೈಸರ್ಗಿಕವಾಗಿ ದೊರೆಯುವ ಹಾಗೂ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳನ್ನು ಸಂಶೋಧನೆಗೆ ಒಳಪಡಿಸಿ ಅದರಿಂದ ಔಷಧಿ ಕಂಡುಹಿಡಿದು ಲಕ್ಷಾಂತರ ಜನರಿಗೆ ಉಪ ಯೋಗವಾಗುವ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳನ್ನು ಸಮಾಜಕ್ಕೆ ಸಮರ್ಪಿಸಿರುವ ಹೆಮ್ಮೆಯ ಸಂಸ್ಥೆಯಾಗಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ ಎನಿಸು ತ್ತದೆ ಎಂದರು.
ಸಂಸ್ಥೆಯ ಬೆಳವಣಿಗೆ ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ೧೩ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆ ಇಂದು ನೋನಿಯಿಂದ ಉತ್ಪಾದಿಸಲ್ಪಡುವ ಹಲವಾರು ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಿದೆ. ಉತ್ಪನ್ನಗಳಿಗೆ ಬೇಡಿಕೆ ಎಷ್ಟಿದೆ ಎಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ನಂಬಿಕೆ ಇರುವುದರಿಂದಲೇ ವ್ಯಾಲ್ಯೂ ಪ್ರೋಡಕ್ಸ್ ಸಂಸ್ಥೆಯ ನೋನಿ ಉತ್ಪನ್ನಗಳಿಗೆ ಅಷ್ಟೊಂದು ಬೇಡಿಕೆ ಕಂಡು ಬಂದಿದೆ ಎಂದರು.
ಔಷಧಿ ಗುಣ ಹೊಂದಿರುವ ನೋನಿ ಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಅದನ್ನು ಇಡೀ ರಾಷ್ಟ್ರಕ್ಕೆ, ಸಮಾಜಕ್ಕೆ ಅರ್ಪಿಸಿದ್ದಾರೆ. ಯಾವುದೇ ಒಂದು ವ್ಯಾಪಾರ ಅಥವಾ ಉದ್ಯಮ ಯಶಸ್ಸು ಪಡೆಯಲು ಒಳ್ಳೆಯ ತಂಡ ಕಟ್ಟಬೇಕು. ಒಳ್ಳೆಯ ತಂಡ ಇದ್ದರೆ ಸಾಲದು ಉತ್ಪನ್ನಗಳು ಮಾರುಕಟ್ಟೆಗೆ ತಲುಪಿಸಬೇಕು. ಜೊತೆಗೆ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಬೇಕು. ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಕೇವಲ ೧೩ ವರ್ಷ ದಲ್ಲಿ ದೊಡ್ಡ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಕೈಗೊಂಡು, ಅಚ್ಚುಕಟ್ಟಾಗಿ ಗ್ರಾಹಕರನ್ನು ತಲುಪಿರುವುದು ಹೆಮ್ಮೆಯನ್ನುಂಟು ಮಾಡು ತ್ತದೆ. ಇದಕ್ಕೆ ಮುಖ್ಯವಾಗಿ ಇಲ್ಲಿನ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಪನ್ನಗಳು ಹೊರಬರಬೇಕು. ಗ್ರಾಹಕರುಗಳಿಗೆ ಕೈಗೆಟಕುವ ದರದಲ್ಲಿ ದೊರೆಯುವಂತಾಗ ಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಔಷಧಿಗಳು ರಾರಾಜಿಸುವಂತಾ ಗಬೇಕೆಂದು ಆಶಿಸಿದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ವ್ಯವ ಸ್ಥಾಪಕ ನಿರ್ದೇಶಕ ಡಾ. ಏ.ಕೆ. ಶ್ರೀನಿವಾಸ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕ ಕಾರ್ಮಿಕ ವರ್ಗ, ಸಂಶೋಧನಾ ತಂಡ, ವೈದ್ಯರ ತಂಡ, ಸಿಬ್ಬಂದಿಗಳು ಇವರೆಲ್ಲರ ಪ್ರಯತ್ನದ ಫಲವಾಗಿ ವ್ಯಾಲ್ಯೂ ಪ್ರೋಡಕ್ ನೋನಿ ಉತ್ಪನ್ನಗಳು ಇಂದು ಇಷ್ಟೊಂದು ಪ್ರಮಾಣದಲ್ಲಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಯೋಚನೆ-ಯೋಜನೆ- ಕನಸು ಇನ್ನೂ ಬಹಳಷ್ಟಿದೆ. ಯಾವುದೇ ಒಂದು ಕೆಲಸವನ್ನು ಕೈಗೊಳ್ಳುವಾಗ ನಿರ್ದಿಷ್ಟ ಗುರಿ ಇರಬೇಕು. ಆಗ ಯಶಸ್ಸು, ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕಳೆದ ೧೩ ವರ್ಷಗಳಿಂದ ಅಮೃತ್ ನೋನಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಾ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುವುದಕ್ಕೆ ದೈವಿಕ ಶಕ್ತಿ ಜತೆಗೆ ಗ್ರಾಹಕರು, ರೈತರು ಹಾಗೂ ಹಿತೈಷಿಗಳ ಆಶೀರ್ವಾದ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವ್ಯಾಲ್ಯೂ ಪ್ರೊಡಕ್ಟ್ಸ್ ಸಂಸ್ಥೆ ನಿರ್ದೇಶಕಿ ಅಂಬುಜಾಕ್ಷಿ, ಓಂ ಶ್ರೀ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕಿ ಮಂಗಳಾಂಬಿಕೆ, ನಿರ್ದೇಶಕ ನಾರಾಯಣ್, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಕೃಷಿ ವಿಶ್ವವಿದ್ಯಾನಿಲಯದ ನಿಕಟ ಪೂರ್ವ ಉಪಕುಲಪತಿ ಡಾ. ಎಂ.ಕೆ. ನಾಯಕ್, ಟಿವಿ ವಾಹಿನಿ ನಿರೂಪಕ ಮುರಳಿ, ಹರಿಕೃಷ್ಣ, ಶಶಿಕಾಂತ್ ಮತ್ತಿತರರಿದ್ದರು.