ಶಿವಮೊಗ್ಗ, ಏ.೩೦:
ಭೋವಿ ಸಮಾಜದ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಬಿಜೆಪಿ ಮುಖಂಡರ ವರ್ತನೆ ವಿರೋಧಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದಂತೆ ಶಿವಮೊಗ್ಗ ಜಿಲ್ಲಾ ಭೋವಿ ಸಮಾಜದ ಮುಖಂಡ ಜಗದೀಶ್ ಮನವಿ ಮಾಡಿದ್ದಾರೆ.
ಶಿವಮೊಗ್ಗ ಕ್ಷೇತ್ರಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭದ್ರಾವತಿ ಕ್ಷೇತ್ರವನ್ನು ಬಿಜೆಪಿಯಿಂದ ಗೆಲ್ಲಿಸುವ ಮಾತನಾಡಿದ್ದಾರೆ. ಚುನಾವಣೆ ವರ್ಷ ಬಾಕಿಯಿದ್ದರೂ ಆತುರ ತೋರಿಸುತ್ತಿರುವ ಬಿಎಸ್ವೈ ಸೇರಿದಂತೆ ರಾಜ್ಯಮಟ್ಟದ ಬಿಜೆಪಿ ನಾಯಕರು ಭೋವಿ ಸಮಾವೇಶಕ್ಕೆ ಗೈರಾಗಿದ್ದರು. ಭೋವಿ ಸಮಾಜವನ್ನು ನಿರ್ಲಕ್ಷಿಸಿದ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭದ್ರಾವತಿ ಕ್ಷೇತ್ರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭೋವಿ ಸಮಾಜದ ಜನರಿದ್ದು, ನಮ್ಮ ಸಮುದಾಯದ ರಾಜ್ಯ ಮಟ್ಟದ ಸಮಾವೇಶಕ್ಕೆ ಗೈರಾಗಿರುವ ಬಿಜೆಪಿ ಮುಖಂಡರಿಗೆ ತಕ್ಕ ಉತ್ತರ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಭೋವಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಬಾರದು ಎಂದು ಮನವಿ ಮಾಡಿದ್ದಾರೆ.