ಶಿವಮೊಗ್ಗ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ನಡೆದ ಹಲ್ಲೆಯನ್ನು ತಾಲ್ಲೂಕು ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲವು ದೇಶದ್ರೋಹಿ ಸಂಘಟನೆಗಳ ಪದಾಧಿಕಾರಿಗಳು ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನಮ್ಮ ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಕೋಮುಗಲಭೆ ನಡೆಸಿದವರು ಯಾರೇ ಆಗಲೀ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಖಂಡ ಶ್ರೀನಿವಾಸ ಮೂರ್ತಿಯವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಅವರಿಗೆ ಆಗಿರುವ ಆಸ್ತಿ ಪಾಸ್ತಿ ನಷ್ಟವನ್ನ ನಷ್ಟ ಮಾಡಿದವರಿಂದಲೇ ವಸೂಲಿ ಮಾಡಬೇಕು. ಗುಂಡಾ ಕಾಯ್ದೆ ಜಾರಿಗೆ ತಂದು ಎಲ್ಲರನ್ನು ಬಂಧಿಸಬೇಕು. ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಇದೊಂದು ದುರುದ್ದೇಶಪೂರ್ವಕವಾದ ಹಲ್ಲೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಹೇಳಿಕೆಯನ್ನು ದೂರು ನೀಡಿ ಬಗೆಹರಿಸಿಕೊಳ್ಳಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಮಾರ್ಗ. ಆದರೆ ಈ ರೀತಿ ಮಾಡಿರುವುದು ಸರಿಯಲ್ಲ. ಅಖಂಡ ಶ್ರೀನಿವಾಸ ಮೂರ್ತಿಯವರು ನಮ್ಮ ಸಮಾಜದ ಮುಖಂಡರು ಹೌದು. ಅವರ ಜೀವಕ್ಕೆ ಹಾನಿಯಾಗದಂತೆ ಭದ್ರತೆ ಒದಗಿಸಬೇಕು ಎಂದರು.
ಮನವಿ:
ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ತಾಲ್ಲೂಕು ಭೋವಿ ಸಮಾಜದ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿತು.
ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆಯಲ್ಲಿ ಸಮಾಜದ ಪ್ರಮುಖರಾದ ಬಸವರಾಜ್, ಗಣೇಶ್, ನವುಲೆ ಮಂಜುನಾಥ್, ಕೃಷ್ಣಪ್ಪ ಸೇರಿದಂತೆ ಹಲವರಿದ್ದರು.