ಶಿವಮೊಗ್ಗ: ನಗರದ ಅನುಪಿನಕಟ್ಟೆಯಲ್ಲಿರುವ ಮೌಂಟೇನ್ ಇನ್ನೋವೆಟಿವ್ ಸ್ಕೂಲ್ನಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರುಗಳಿಗೆ ಕ್ರೀಡಾಕೂಟ ಆಯೋಜಿಸುವ ಮೂಲಕ ವಿಭಿನ್ನವಾಗಿ ಶಿಕ್ಷಕರ ದಿನಾಚರಣೆ ಆಚರಿಸಿದರು.
ಮ್ಯೂಸಿಕಲ್ ಛೇರ್, ರನ್ನಿಂಗ್ ವಿತ್ ಬಾಲ್, ಒನ್ ಮಿನಿಟ್ ಗೇಮ್, ಪಸಲ್ ಮತ್ತಿತರೆ ಮನೋರಂಜನಾತ್ಮಕ ಲಘು ಕ್ರೀಡೆಗಳನ್ನು ಆಯೋಜಿಸಿದ್ದರಲ್ಲದೆ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದ ಶಿಕ್ಷಕರನ್ನು ಹುರಿದುಂಬಿಸಿ, ಚಪ್ಪಾಳೆ ತಟ್ಟಿ ಪೋತ್ಸಾಹಿಸಿದರು. ಗೆಲುವು ಸಾಧಿಸಿದ ಶಿಕ್ಷಕರನ್ನು ಅಭಿನಂದಿಸಿದರು. ಸೋತ ಶಿಕ್ಷಕರನ್ನು ಸಮಾಧಾನ ಪಡಿಸಿದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಮನೋವೈದ್ಯೆ ಶುಭ್ರತಾ ಉದ್ಘಾಟಿಸಿ ಮಾತನಾಡಿ ಶೈಕ್ಷಣಿಕ ಸಾಧನೆಯಲ್ಲಿ ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದೊಂದಿಗೆ ಸೃಜನಶೀಲತೆಯಿಂದ ಕೌಶಲ್ಯಾಧಾರಿತ ಶಿಕ್ಷಣ ಬೋಧಿಸಿದಲ್ಲಿ ವಿದ್ಯಾರ್ಥಿಗಳು ಸಾಫಲ್ಯತೆಯನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಧೈರ್ಯ, ಸ್ಥೈರ್ಯ ಕೌಶಲ್ಯಾಧಾರಿತ ಶಿಕ್ಷಣದಿಂದ ಸಿದ್ಧಿಸುತ್ತದೆ. ಮಕ್ಕಳಲ್ಲಿ ಕಲಿಕಾ ಹಂತಗಳು ಪ್ರಾರಂಭವಾಗುವಾಗಲೇ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವುದು ಅಗತ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆದು ಬದುಕನ್ನು ಬೇರೆ ಬೇರೆ ಆಯಾಮಗಳಿಂದ ಅನ್ವೇಷಿಸುವ ಸೃಜತೆಯನ್ನು ಕಲಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುವೆಂಪು ಶತಮಾನೋತ್ಸವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ. ಮಧು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅನೇಕರಿಗೆ ತಮ್ಮ ಶಿಕ್ಷಕರೇ ರೋಲ್ ಮಾಡೆಲ್ ಆಗಿದ್ದಾರೆ. ಅನೇಕ ಬಾರಿ ತಂದೆ-ತಾಯಿ ಮಾತು ಕೇಳದ ಮಕ್ಕಳು ಶಿಕ್ಷಕರ ಮಾತು ಕೇಳುತ್ತಾರೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯುತವಾಗಿ ಶಿಕ್ಷಣ ಕಲಿಸಬೇಕೆಂದು ಕಿವಿ ಮಾತು ಹೇಳಿದರು.
ಮೌಂಟೇನ್ ಇನ್ನೋವೆಟಿವ್ ಎಜುಕೇಷನ್ ಸೊಸೈಟಿ (ಎಂಐಇಎಸ್) ಶೈಕ್ಷಣಿಕ ನಿರ್ದೇಶಕ ಶಿವಕುಮಾರ್ ಟಿ.ಎಸ್., ಕಾರ್ಯದರ್ಶಿ ಶಿಲ್ಪಶ್ರೀ, ಪ್ರಾಂಶುಪಾಲರಾದ ಶಿಲ್ಪಾ ಅರವಿಂದ್, ಆಡಳಿತ ಸಲಹೆಗಾರ ಮಂಜುನಾಥ್ ಪಾಂಡೆ, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರುಗಳಾದ ಸುನಿಧಿ ಸ್ವಾಗತಿಸಿ, ಜುನೇರ ಕುತೇಜ ನಿರೂಪಿಸಿ, ಸಹನ ವಂದಿಸಿದರು.