ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಅಂತಹ ಕೊಡುಗೆ ನೀಡಿದವರ ಅರಿವು ಯುವ ಸಮೂಹಕ್ಕೆ ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅಭಿಪ್ರಾಯಪಟ್ಟರು.
ನಗರದ ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಸ್ತೂರಬಾ ಬಾಲಿಕಾ ಪ್ರೌಢಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಕುರಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಕುರಿತು ಅಧ್ಯಯನ ನಡೆಸಿ. ಅದರಿಂದ ಪಡೆದ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಜೀವನಕ್ಕೆ ಜೀವ ನೀಡುವ ಅಂಶವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಈಸೂರು ಧಂಗೆಯಂತಹ ಇತಿಹಾಸದ ಪುಟಗಳನ್ನು ಇಂತಹ ವೇದಿಕೆಗಳ ಮೂಲಕ ಮೆಲುಕು ಹಾಕಲು ಪ್ರಯತ್ನಸುತ್ತಿರಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕ್ವಿಟ್ ಇಂಡಿಯಾ ಚಳುವಳಿ ನಡೆದು ಆಗಸ್ಟ್ 08 ಕ್ಕೆ 82 ವರ್ಷಗಳು ಸಂದಿವೆ. ಸ್ವಾತಂತ್ರ್ಯ ಚಳುವಳಿ ಅಹಿಂಸೆಯ ಮೂಲಕ ನಡೆದರೆ, ಸ್ವಾತಂತ್ರ್ಯ ನಂತರ ಧರ್ಮದ ಕಾರಣಕ್ಕೆ ಘರ್ಷಣೆಯ ವಿಭಜನೆ ನಡೆಯುತ್ತದೆ. ಇಂದಿಗೂ ಅಂತಹ ಘರ್ಷಣೆಗಳು ನಡೆಯುತ್ತಿರುವುದು ಬೇಸರದ ಸಂಗತಿ.
ಹೇಗೆ ಹಣ್ಣೆಲೆ ಬಿದ್ದು ಚಿಗುರುವ ಎಲೆಗಳಿಗೆ ಅವಕಾಶ ಮಾಡಿಕೊಡುತ್ತದೆಯೊ, ಅದೇ ರೀತಿಯಲ್ಲಿ ನಮ್ಮ ಮುಂದಿನ ಸಮೂಹ ಈ ಸ್ವಾತಂತ್ರ್ಯದ ಮೂಲಕ ಚಿಗುರಲಿ ಎಂದು ಮಹಾತ್ಮ ಗಾಂಧೀಜಿಯವರು ಆಶಯವಾಗಿತ್ತು. ಅದರೇ ಇಂದು ಯಾವ ರೀತಿಯಲ್ಲಿ ಸಮಾಜದಲ್ಲಿ ಚಿಗುರುವ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಆತ್ವಾವಲೋಕನ ಮಾಡಿಕೊಳ್ಳಬೇಕಿದೆ.
ನಮ್ಮನ್ನು ಆಳುವವರಿಗೆ ಹಿರಿಯರ ತ್ಯಾಗ ಬಲಿದಾನಗಳ ಅರಿವಿನ ಅವಶ್ಯಕತೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಂತಹ ಅರಿವನ್ನು ಪಡೆಯುವ ಮತ್ತು ಆಳುವವರಿಗೆ ಅರಿವು ನೀಡುವ ಪ್ರಯತ್ನ ಯುವ ಸಮೂಹ ಮಾಡಬೇಕಿದೆ. ಇಂದು ನಾವು ಓಡಾಡುವ ಅನೇಕ ಜಾಗಗಳು ಹೋರಾಟದ, ತ್ಯಾಗ ಬಲಿದಾನ ನಡೆದ ಸ್ಥಳಗಳಾಗಿವೆ. ಅಂತಹ ಜಾಗ, ವ್ಯಕ್ತಿ, ವ್ಯಕ್ತಿತ್ವಗಳ ಕುರಿತು ಜ್ಞಾನ ಪಸರಿಸುವ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ಸಾರೋಣ ಎಂದು ಹೇಳಿದರು.
ತಹಶಿಲ್ದಾರರಾದ ಎಂ.ಲಿಂಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಆಶಯ ನುಡಿಗಳನ್ನಾಡಿದರು. ಕಸ್ತೂರಬಾ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸತೀಶ್, ಪದಾಧಿಕಾರಿಗಳಾದ ನಳಿನಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.