ಶಿವಮೊಗ್ಗ,ಜೂ.14: ಬರಗಾಲ ಪರಿಹಾರ ಸಮರ್ಪಕವಾಗಿ ವಿತರಣೆಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 224 ತಾಲ್ಲೂಕುಗಳನ್ನು ಬರಗಾಲವೆಂದು ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು. ರಾಜ್ಯಸರ್ಕಾರ ಕೇಂದ್ರ ಸರ್ಕಾರ ವಿಪತ್ತು ಮಾರ್ಗಸೂಚಿಯ ಪ್ರಕಾರ ಬಿಡುಗಡೆ ಮಾಡಿದ ಹಣವನ್ನಷ್ಟೇ ಕೊಡುತ್ತಿದೆ. ಹಿಂದಿನ ಸರ್ಕಾರ ರಾಜ್ಯ ವಿಪತ್ತು ನಿಧಿಯಿಂದ ಸೇರಿಸಿ ಹಣ ಬಿಡುಗಡೆ ಮಾಡುತ್ತಿದ್ದರು ಎಂದರು.

ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿಧಿಯಿಂದ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಎಕರಿಗೆ 25 ಸಾವಿರ ರೂ. ಪರಿಹಾರ ನೀಡಬೇಕು.  ಈಗ ಬಿತ್ತನೆಯ ಸಮಯವಾಗಿದೆ. ರೈತರು ಬೀಜ, ಗೊಬ್ಬರ, ಖರೀದಿಸಬೇಕಾಗಿದೆ. ಆದ್ದರಿಂದ ತಕ್ಷಣವೇ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಬೆಳೆ ವಿಮೆ ಹಣ ಇನ್ನೂ ಅನೇಕ ರೈತರಿಗೆ ಸಿಕ್ಕಿಲ್ಲ. ಬೆಳೆವಿಮೆ ಹಣ ಎಲ್ಲಾ ರೈತರಿಗೂ ತಲುಪಬೇಕು. ಜಿಲ್ಲಾ ಅಧಿಕಾರಿಗಳು ವಿಮಾ ಕಂಪನಿಯವರೊಂದಿಗೆ ಮಾತನಾಡಿ, ರೈತರಿಗೆ ಹಣ ನೀಡಬೇಕು. ಮತ್ತು ಗ್ಯಾರಂಟಿ ಯೋಜನೆಗಳಿಂದ ರೈತರಿಂದ ಜನಸಾಮಾನ್ಯರಿಂದ ಹಣ ವಸೂಲಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಬೋರ್‍ವೆಲ್ ಕೊರೆಯಲು ಪ್ರಾಮಾಣಿಕ ದರ ನಿಗಧಿಮಾಡಬೇಕು. ಮಳೆ ನೀರನ್ನು ಹಿಂಗಿಸಿ ದಸ್ತಾನು ಮಾಡಿ, ಉಪಯೋಗಿಸಲು ಸಹಾಯಧನ ನೀಡಬೇಕು. ಕುಡಿಯುವ ನೀರಿನ ಹಾಹಾಕರ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕಸಟ್ಟಿರುದ್ರೇಶ್, ಇ.ಬಿ.ಜಗದೀಶ್, ಕೆ.ರಾಘವೇಂದ್ರ, ಸಿ.ಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಜ್ಞಾನೇಶ್ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!