ನವದೆಹಲಿ,ಜ.12:
ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಕಳೆದ 48 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವಿವಾದಿತ 3 ಕಾಯ್ದೆಗಳಿಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ಸಮಸ್ಯೆ ಬಗೆಹರಿಕೆಗೆ ಸಮಿತಿಯೊಂದನ್ನ ರಚನೆ ಮಾಡಿದೆ.
ವಿವಾದಿತ ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥಪಡಿಸ ಲೇಬೇಕಾಗಿದೆ. ಅದ್ದರಿಂದ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಸಮಿತಿಯಲ್ಲಿ ಕಾಯ್ದೆ ಕುರಿತ ಸಾಧಕ ಹಾಗೂ ಬಾಧಕಗಳ ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾಗಿ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ಕಾಯ್ದೆ ಕುರಿತು ಈಗಾಗಲೇ ಸಾಕಷ್ಟು ಸಂಧಾನ ಸಭೆಗಳು ನಡೆದಿದೆ. ಹಲವು ನಾಯಕರು ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಮಾತ್ರ ಚರ್ಚೆ ನಡೆಸಲಿಲ್ಲ. ನ್ಯಾಯಾಲಯವು ರಚಿಸುವ ಯಾವುದೇ ಸಮಿತಿಯ ಮುಂದೆ ನಾವು ಹಾಜರಾಗುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆಂದು ರೈತರ ಪರ ವಕೀಲ ಎಮ್ಎಲ್ ಶರ್ಮಾ ಅವರು ಹೇಳಿದರು.
ಈ ವೇಳೆ ಮಾತನಾಡಿರುವ ಮುಖ್ಯ ನ್ಯಾಯಮೂರ್ತಿಗಳು, ಪ್ರಧಾನಿಯನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರು ಯಾವುದೇ ಅರ್ಜಿದಾರರಲ್ಲ. ನಾವು ಕಾನೂನುಗಳ ಸಿಂಧುತ್ವದ ಬಗ್ಗೆ ಮತ್ತು ಪ್ರತಿಭಟನೆಯಿಂದ ಜೀವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ನಮ್ಮಲ್ಲಿರುವ ಅಧಿಕಾರಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಶಾಸನವನ್ನು ಅಮಾನತುಗೊಳಿಸುವ ಮತ್ತು ಸಮಿತಿಯನ್ನು ರಚಿನೆ ಮಾಡುವ ಅಧಿಕಾರ ನಮಗಿದೆ. ಸಮಿತಿಯು ನಮಗಾಗಿಯೇ ಆಗಿರುತ್ತದೆ. ನಮ್ಮೊಂದಿಗೆ ಸಹಕಾರ ನೀಡಬೇಕು. ಸಮಿತಿಯು ಯಾವುದೇ ಆದೇಸ ನೀಡುವುದಿಲ್ಲ. ಶಿಕ್ಷಣೆಯನ್ನು ನೀಡುವುದಿಲ್ಲ. ಕಾಯ್ದೆ ಕುರಿತ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಸಮಿತಿ ವರದಿ ಸಲ್ಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಸಮಿತಿಯನ್ನು ರಚನೆ ಮಾಡುವುದರಿಂದ ಕಾಯ್ದೆ ಕುರಿತು ನಮಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ನಮಗೆ ಈ ಕುರಿತು ಇನ್ನೂ ಯಾವುದೇ ವಾದ ಪ್ರತಿವಾದಗಳು ಬೇಕಿಲ್ಲ. ನಾವು ಸಮಸ್ಯೆ ಬಗೆಹರಿಸಲೇಬೇಕಿದೆ. ನಿಮಗೆ ಪ್ರತಿಭಟನೆ ನಡೆಸುವುದೇ ಬೇಕಿದ್ದರೆ, ಪ್ರತಿಭಟನೆ ನಡೆಸಿ ಎಂದು ಹೇಳುವ ಮೂಲಕ ರೈತರ ಪರ ಪ್ರಮುಖ ವಕೀಲರು ಸುಪ್ರೀಂ ಕೋರ್ಟ್’ಗೆ ಹಾಜರಾಗದ ಕುರಿತು ಮುಖ್ಯ ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರಾಮ್ಲೀಲಾ ಮೈದಾನ ಅಥವಾ ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ರೈತರು ಇಚ್ಚಿಸಿದರೆ ಅವರು ದೆಹಲಿ ಪೊಲೀಸ್ ಆಯುಕ್ತರಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಇದನ್ನು ನಮ್ಮ ಆದೇಶದಲ್ಲಿ ಉಲ್ಲೇಖಿಸುತ್ತೇವೆ ಎಂದು ಮುಖ್ಯನ್ಯಾಯಮೂರ್ತಿ ತಿಳಿಸಿದರು.
ಸಮಿತಿ ಈ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿದೆ. ನಾವು ಕಾನೂನಿಗೆ ತಡೆ ನೀಡಲು ಚಿಂತಿಸುತ್ತಿದ್ದೇವೆ. ಆದರೆ ಅನಿರ್ದಿಷ್ಟಾವಧಿಯಾಗಿ ಅಲ್ಲ ಎಂದು ತಿಳಿಸಿದರು.
ಅರ್ಜಿದಾರರೊಬ್ಬರ ಪರ ಹಾಜರಾದ ಶ್ರೀ ವಕೀಲ ಹರೀಶ್ ಸಾಳ್ವೆಯರು ಮಾತನಾಡಿ, ಕಾನೂನುಗಳ ಜಾರಿಗೆ ನೀಡಲಾಗುವ ತಡೆಯನ್ನು ರಾಜಕೀಯ ವಿಜಯವೆಂದು ನೋಡಬಾರದು. ಕಾಯ್ದೆಗಳ ಬಗ್ಗೆ ವ್ಯಕ್ತವಾದ ಕಳವಳಗಳ ಗಂಭೀರ ಪರೀಕ್ಷೆ ಎಂಬಂತೆ ಅದನ್ನು ನೋಡಬೇಕು ಎಂದು ತಿಳಿಸಿದರು.