ಶಿವಮೊಗ್ಗ: ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್.ಈಶ್ವರಪ್ಪ ಹೇಳಿದರು.


ಗುಂಡಪ್ಪ ಶೆಡ್‌ನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಇರುವುದು ಜನರಿಗೂ ಸಹ ಇಷ್ಟವಿಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡಿದ ಎಲ್ಲರಿಗೂ ಅನ್ಯಾಯವಾಗಿದೆ. ಅನೇಕ ಕಾರ್ಯಕರ್ತರು ತಮಗಾದ ನೋವನ್ನು ನನ್ನ ಬಳಿ ತೋಡಿಕೊಂಡಿದ್ದು, ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಪಕ್ಷ ನಿಷ್ಠೆ, ಹಿಂದುತ್ವದ ಹೋರಾಟ ಬೆಂಬಲಿಸಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದರು.
ನನ್ನ ನಿರ್ಧಾರ ಬೆಂಬಲಿಸಿ ನಮ್ಮ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಹಳಷ್ಟು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದರು.


ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಗೆಲುವಿನ ನಂತರ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಮತದಾರರ ಪರವಾಗಿ ಕೈ ಎತ್ತುತ್ತೇನೆ. ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಾಸ್ಸು ಪಡೆಯಲಿದ್ದಾರೆ ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಮೋದಿಯಲ್ಲ ಬ್ರಹ್ಮ ಬಂದು ಹೇಳಿದರು ನಾನು ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂದರು.


ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ. ಅದರೊಂದಿಗೆ ನನಗಾದ ಅನ್ಯಾಯವನ್ನು ಗಮನಿಸಿ, ಅದನ್ನು ಸರಿಪಡಿಸಲು ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರ ಪ್ರೀತಿ ಹಾಗೂ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ಧಿಗಾಗಿ ದುಡಿಯುತ್ತೇನೆ. ಭದ್ರಾವತಿ, ಶಿಕಾರಿಪುರ, ಸಾಗರ ಆಶ್ಚರ್ಯಕರ ರೀತಿಯಲ್ಲಿ ಬೈಂದೂರು ಮತ್ತು ಶಿವಮೊಗ್ಗ ಗ್ರಾಮಾಂತರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಭೇಟಿಯಾದ ಎಲ್ಲಾ ಗುರುಗಳಿಗೂ ನನಗೆ ಆಶೀರ್ವಾದ ಮಾಡಿದ್ದಕ್ಕೆ ಕೆಲವರು ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುರುಗಳು ನನ್ನ ಬಳಿ ತಮಗೆ ನೋವು ಕೊಟ್ಟರು ಎಂದು ಹೇಳಿಕೊಂಡಿದ್ದಾರೆ.


ಭದ್ರಾವತಿಯ ಬಿಸಿಯೂಟದ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಹನುಮಕ್ಕ ಕೂಡ ಸಹಸ್ರಾರು ಹೋರಾಟಗಾರರೊಂದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ನಾವು ಬೇರೆ ಪಕ್ಷದವರು ಆದರೂ ಕೂಡ ಕೇಸರಿ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಯಾವ ಪಕ್ಷವಾದರೂ ನಮ್ಮ ಬೆಂಬಲ ಈಶ್ವರಪ್ಪನವರಿಗೆ ಎಂದಿದ್ದಾರೆ. ನನ್ನನ್ನು ಕೇಸರಿ ನಾಯಕ ಎಂದು ಒಪ್ಪಿಕೊಂಡಿದ್ದು ನನಗೆ ಸಂತಸ ತಂದಿದೆ ಎಂದರು.
ಎಂಪಿಎಂ, ವಿಐಎಸ್‌ಎಲ್ ಭದ್ರಾವತಿಯ ಎರಡು ಕಣ್ಣುಗಳಾಗಿದ್ದು, ಅದನ್ನು ನೀವು ಗೆದ್ದ ಮೇಲೆ ಪುನರುಜ್ಜೀವನ ಮಾಡಬೇಕು ಎಂದು ಬಹುತೇಕ ಕಾರ್ಮಿಕರು ಆಶಯ ವ್ಯಕ್ತಪಡಿಸಿ ಬೆಂಬಲ ಘೋಷಿಸಿದ್ದಾರೆ. ಅವರ ಆಸೆಯನ್ನು ಈಡೇರಿಸಲು ನಾನು ಗೆದ್ದ ಬಳಿಕ ಪ್ರಯತ್ನಿಸುತ್ತೇನೆ. ಮೊದಲ ಬಾರಿಗೆ ನಾನು ಆರ್‌ಎಸ್‌ಎಸ್ ಪ್ರಮುಖರ ಸೂಚನೆಯನ್ನು ಮೀರಿದ್ದೇನೆ. ನನ್ನ ಜೀವನದಲ್ಲಿ ನಾನು ಯಾವತ್ತೂ ಆರ್‌ಎಸ್‌ಎಸ್ ಸೂಚನೆಯನ್ನು ಮೀರಿದ್ದಲ್ಲ. ಅನೇಕ ಆರ್.ಎಸ್.ಎಸ್. ಹಿರಿಯರು ಮನೆಗೆ ಬಂದು ಹೇಳಿದಾಗ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ನಡೆದ ಎಲ್ಲಾ ವಿಚಾರವನ್ನು ಅವರಿಗೆ ತಿಳಿಸಿದ್ದೇನೆ. ಅವರು ಸುಮ್ಮನಾಗಿ ವಾಪಾಸ್ಸು ತೆರಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ಬಗ್ಗೆ ಅಮಿತ್‌ಶಾ ಅವರಿಗೂ ವಿವರಿಸಿದ್ದೇನೆ. ಮೋದಿ ಪ್ರಧಾನಿಯಾಗುವುದು ಶತಸಿದ್ಧ ಅದನ್ನು ಯಾರು ತಪ್ಪಿಸಲು ಆಗುವುದಿಲ್ಲ. ಬಿಜೆಪಿ ನನ್ನ ತಾಯಿ ಇದ್ದ ಆಗೆ. ನಾನು ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ. ಗೆಲ್ಲುವಿನ ವಿಶ್ವಾಸ ನನಗೆ ಈಗ ಬಂದಿದೆ ಎಂದರು.
ಈಗ ರಾಜ್ಯ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಮನೆ ಮಾಡಿದೆ. ಕುಟುಂಬ ರಾಜಕಾರಣ ಬಂದಿದೆ. ಅವರ ಹಿಂಬಾಲಕರಿಗೆ ಮಾತ್ರ ಸ್ಥಾನಮಾನಗಳು ಸಿಗುತ್ತಿವೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಪಕ್ಷವನ್ನು ರಾಜ್ಯದಲ್ಲಿ ಉಳಿಸಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದರು.


ವಕೀಲ ಅಶೋಕ್‌ಭಟ್ ಮಾತನಾಡಿ, ಈಶ್ವರಪ್ಪನವರ ಸ್ಪರ್ಧೆ ನೇರವಾಗಿ ಹೈಕಮಾಂಡ್ ಆದೇಶ ಮಾಡಿದೆ ಎಂದು ನಮಗೆಲ್ಲ ಅನಿಸುತ್ತಿದೆ. ಅಧಿಕಾರ ಒಂದೇ ಕುಟುಂಬದ ಪಾಳ್ಯಗಾರಿಕೆಯಾಗಬಾರದು. ಕೆಲವರು ಪಕ್ಷ ಕಟ್ಟಿ, ಹೊರಗೆ ಹೋದರು ಆದರೆ ಈಶ್ವರಪ್ಪನವರು ಬಿಜೆಪಿ ಬಿಟ್ಟಿಲ್ಲ, ತತ್ವದ ಆಧಾರದ ಮೇಲೆ ನಿಂತಿದ್ದಾರೆ. ಅವರಿಗೆ ಮತ ಹಾಕಿದರೆ ಮೋದಿಗೆ ಹಾಕಿದಾಗೆ ಎಂದರು.
ವ್ಯವಸ್ಥೆ ಸರಿಪಡಿಸಲು ನಿಂತಿರುವ ಅವರಿಗೆ ಮತದಾರ ಧ್ವನಿಯಾಗಬೇಕು ಎಂದರು. ಅನ್ಯಾಯವಾದಾಗ ಪ್ರತಿಭಟಿಸದೆ ಇದ್ದರೆ ನಾವು ಕೂಡ ಅನ್ಯಾಯದಲ್ಲಿ ಭಾಗಿಯಾದಾಗೆಯಾಗುತ್ತದೆ ಎಂದರು.


ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಒಟ್ಟು ೬೦೦ ಕೋಟಿ ರೂ.ಗಳನ್ನು ಪಕ್ಷ ಭೇದ ಮರೆತು ಯಾವುದೇ ಜಾತಿಯನ್ನು ನೋಡದೆ ಎಲ್ಲಾ ಸಮುದಾಯ ಭವನಗಳಿಗೆ ಹಾಗೂ ದೇವಾಲಯಗಳ ಜೀರ್ಣೋದ್ದಾರಕ್ಕೆ ತಂದವರು. ಹಿಂದುತ್ವದ ಒಂದು ಧ್ವನಿ ಅವರಿಗೆಯಾದ ಅನ್ಯಾಯ ಸರಿಪಡಿಸಬೇಕು ಎಂದರು.
ಮಹಾಲಿಂಗಶಾಸ್ತ್ರಿ, ಭದ್ರಾವತಿಯ ನಾಯಕ ಮಹೇಶ್‌ಕುಮಾರ್, ಅಂಗನವಾಡಿ ಕಾರ್ಯಕರ್ತೆಯರ ಮುಖಂಡೆ ಶಾರದಮ್ಮ , ವೀರಶೈವ ಪ್ರಮುಖರಾದ ರುದ್ರೇಶ್, ಜಗದೀಶ್‌ಪ್ಪ, ಶಿಕಾರಿಪುರದ ರುದ್ರೇಗೌಡ, ಹೆಚ್.ಎಸ್.ಬೂದಪ್ಪ, ಗಂಗಾಧರ್, ತೇಜು, ಇ.ಈಶ್ವಸ್, ಕೆ.ಇ.ಕಾಂತೇಶ್, ಛಲವಾದಿ ಸಮಾಜದ ಅಧ್ಯಕ್ಷ ಸುರೇಶ್, ಭೂಪಾಲ್ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಛಲವಾದಿ, ಜಂಗಮ, ವೀರಶೈವ, ವಿಷ್ಣುಸಮಾಜ, ಬ್ರಾಹ್ಮಣ ಸಮಾಜ, ಜೈನ ಸಮಾಜ, ಉಪ್ಪಾರ ಸಮಾಜ, ತಮಿಳು ಸಮಾಜ ಮುಖಂಡರು ಶುಭ ಹಾರೈಸಿ ಅಭಿನಂದಿಸಿದರು.
ಚುನಾವಣಾ ಕಚೇರಿ ಉದ್ಘಾಟನೆ
ಇನ್ನು, ತಮ್ಮ ನಿವಾಸದಲ್ಲಿಯೇ ಸ್ಥಾಪಿಸಲಾಗಿರುವ ಈಶ್ವರಪ್ಪನವರ ಚುನಾವಣಾ ಕಚೇರಿಯನ್ನು ಮುತ್ತೈದೆಯರು ಇಂದು ಉದ್ಘಾಟಿಸಿದರು.
ಇಂದು ಮುಂಜಾನೆ ಋತ್ವಿಜರಿಂದ ಸಹಸ್ರ ಮೋದಕ ಗಣ ಹೋಮವನ್ನು ನೆರವೇರಿಸಲಾಯಿತು.
ಆನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುತ್ತೈದೆಯರ ಮೂಲಕ ತಮ್ಮ ಕಚೇರಿಯನ್ನು ಈಶ್ವರಪ್ಪನವರು ಉದ್ಘಾಟಿಸಿದರು.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಈ ವೇಳೆ ರಾರಾಜಿಸಿದವು.

By admin

ನಿಮ್ಮದೊಂದು ಉತ್ತರ

error: Content is protected !!