ಆದ್ಯತಾ
ಶಿವಮೊಗ್ಗ, ಮಾರ್ಚ್ 27
      ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ  ಬ್ಯಾಂಕುಗಳಿಗೆ ಸೂಚನೆ ನೀಡಿದರು.


     ಇಂದು ಜಿ.ಪಂ ಸಭಾಂಗಣದಲ್ಲಿ ಬ್ಯಾಂಕರ್‍ಗಳಿಗೆ ಏರ್ಪಡಿಸಲಾಗಿದ್ದ ಡಿಎಲ್‍ಆರ್‍ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಬ್ಯಾಂಕುಗಳು ಆದ್ಯತಾ ವಲಯದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು. 2023-24 ನೇ ಸಾಲಿನ ವಾರ್ಷಿಕ ಗುರಿಯಲ್ಲಿ ಈವರೆಗೆ ಕೃಷಿ ವಲಯದಲ್ಲಿ ಶೇ.51.25, ಎಂಎಸ್‍ಎಂಇ ವಲಯದಲ್ಲಿ ಶೇ.105.77, ಶಿಕ್ಷಣ ಸಾಲ ಶೇ.10.75, ವಸತಿ ಶೇ.11.46 ಸೇರಿದಂತೆ ಒಟ್ಟಾರೆ ಆದ್ಯತಾ ವಲಯದಲ್ಲಿ ಶೇ.57.02 ಪ್ರಗತಿ ಸಾಧಿಸಿದೆ. ಆದ್ಯತಾ ವಲದಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು. ಕೃಷಿ, ಶಿಕ್ಷಣ ಮತ್ತು ವಸತಿ ಸಾಲದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಆಗಬೇಕು ಎಂದು ಸೂಚನೆ ನೀಡಿದರು.


    ಆದ್ಯತಾ ವಲಯದಲ್ಲಿ ಅತಿ ಕಡಿಮೆ ಪ್ರಗತಿ ಸಾಧಿಸಿದ ಹಾಗೂ ಸಿಡಿ ರೇಷಿಯೋ ಶೇ.15 ಕ್ಕಿಂತ ಕಡಿಮೆ ಇರುವ ಬ್ಯಾಂಕುಗಳಿಗೆ ನಿಗದಿತ ಪ್ರಗತಿ ಸಾಧಿಸುವ ಕುರಿತು ಆರ್‍ಬಿಐ ಶಿಸ್ತಿನ ಕ್ರಮ ಜರುಗಿಸಬೇಕು. ಹಾಗೂ ಇಂದು ಸಭೆಗೆ ಗೈರಾದ ಬ್ಯಾಂಕುಗಳಿಗೆ ನೋಟಿಸ್ ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ತಿಳಿಸಿದರು.


    ಇಡೀ ಬ್ಯಾಂಕ್ ವ್ಯವಸ್ಥೆ ವಿಶ್ವಾಸ ಮೇಲೆ ನಿಂತಿದ್ದು, ಆದ್ಯತಾ ವಲಯಕ್ಕೆ ಸಂಬಂಧಿಸಿದಂತೆ ಅದರಲ್ಲೂ ಶೈಕ್ಷಣಿಕ ಸಾಲ ನೀಡುವಲ್ಲಿ ಸ್ವಲ್ಪ ಉದಾರ ನೀತಿಯನ್ನು ಬ್ಯಾಂಕುಗಳು ತೋರಬೇಕು. ಸಿಬಿಲ್ ಸ್ಕೋರ್ ಇಲ್ಲವೆಂದು ಅರ್ಜಿ ತಿರಸ್ಕರಿಸುವುದು ಆಗಬಾರದು. ಅವಶ್ಯಕತೆ ಇರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಂಕುಗಳು ಕೆಲಸ ಮಾಡಬೇಕು ಎಂದರು.
    ಕೆನರಾ ಬ್ಯಾಂಕಿನ ಡಿಜಿಎಂ ದೇವರಾಜ್ ಆರ್ ಮಾತನಾಡಿ, ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಕೃಷಿ ವಲಯದಲ್ಲಿ ಶೇ.51.25, ಎಂಎಸ್‍ಎಂಇ ವಲಯದಲ್ಲಿ ಶೇ.105.77 ಸೇರಿದಂತೆ ಆದ್ಯತಾ ಮತ್ತು ಆದ್ಯತಾರಹಿತ ವಲಯದಲ್ಲಿ ಶೇ.59.18 ಪ್ರಗತಿ ಸಾಧಿಸಿದೆ. ಸಿಡಿ ರೇಷಿಯೋ ಶೇ.76.47 ಸಾಧಿಸಿ ಉತ್ತಮ ಪ್ರಗತಿ ಸಾಧಿಸಿದೆ ಎಂದ ಅವರು ಬ್ಯಾಂಕುಗಳು ಎಲ್ಲ ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸುವಂತೆ ತಿಳಿಸಿದರು.
          ವಸತಿ, ಸ್ವ ಉದ್ಯೋಗ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ಕೆಲವು ಬ್ಯಾಂಕುಗಳಲ್ಲಿ ಬಾಕಿ ಇದ್ದು ಅವುಗಳನ್ನು ಪರಿಶೀಲಿಸಿ ವಿಲೇ ಮಾಡುವಂತೆ ಇದೇ ಸಂದರ್ಭದಲ್ಲಿ ಬ್ಯಾಂಕುಗಳ ಅಧಿಕಾರಿಗಳಿಗೆ ತಿಳಿಸಿದರು.


      ಆರ್‍ಬಿಐ ಬ್ಯಾಂಕ್ ಎಲ್‍ಡಿಓ ಬಿಸ್ವಾಸ್ ಮಾತನಾಡಿ, ಆದ್ಯತಾ ವಲಯ, ಎಂಎಸ್‍ಎಂಇ, ಶಿಕ್ಷಣ ಮತ್ತು ವಸತಿ ಸೇರಿದಂತೆ ಬ್ಯಾಂಕುಗಳಿಗೆ ನೀಡಲಾದ ವಲಯಗಳಲ್ಲಿ ನಿಗದಿತ ಗುರಿಯನ್ನು ಸಾಧಿಸಬೇಕು. ಎಲ್ಲ ಬ್ಯಾಂಕುಗಳು ತಮ್ಮಲ್ಲಿರುವ ಎಲ್ಲ ಉಳಿತಾಯ ಖಾತೆಗಳನ್ನು ಡಿಜಿಟಲ್ ಮೋಡ್‍ಗೆ ತರಬೇಕು. ಜಿಲ್ಲೆಯಲ್ಲಿ ಈವರೆಗೆ ಶೇ.89 ಖಾತೆಗಳು ಡಿಜಿಟಲೈಸ್ ಆಗಿದ್ದು ಶೇ.100 ಆಗಬೇಕೆಂದರು.
    ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಪೋಸ್ಟರ್‍ನ್ನು ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಪೋಸ್ಟರ್‍ನ್ನು ಪ್ರದರ್ಶಿಸುವಂತೆ ಸಿಇಓ ಸೂಚನೆ ನೀಡಿದರು.
      ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ್ ಹೆಚ್ ಸ್ವಾಗತಿಸಿದರು. ನಬಾರ್ಡ್ ಡಿಡಿಎಂ ಶರತ್‍ಗೌಡ, ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!