ಶಿವಮೊಗ್ಗ :ಶರಾವತಿಗೆ ಪಂಪ್ ಸ್ಟೋರೇಜ್ ಮಾಡಲು ಅನುದಾನ ಬಿಡುಗಡೆ ಆಗಿದೆ. ಬಳಕೆಯಾದ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೀಗಾಗಿ 24 ಗಂಟೆಯೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಾರ ನಡೆದು ವರ್ಷವಾದರೂ ಕ್ರಮ ಕೈಗೊಂಡಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಸಿದ ಅವರು, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಂದು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದು ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಗ್ಯಾರೆಂಟಿ ಯೋಜನೆಗಳನ್ನು ರದ್ದು ಮಾಡುವ ಹೇಳಿಕೆಗಳನ್ನು ಬಿಜೆಪಿಯವರು ನೀಡುತ್ತಿದ್ದಾರೆ. ಶಾಸಕ ಬಾಲಕೃಷ್ಣ ಗ್ಯಾರಂಟಿ ರದ್ದಾಗುವ ಬಗ್ಗೆ ನೀಡುವ ಹೇಳಿಕೆ ಮುಖ್ಯವೋ ಸಿಎಂ ನೀಡುವ ಹೇಳಿಕೆ ಮುಖ್ಯವೋ, ಸಿಎಂ ಸಿದ್ದರಾಮಯ್ಯ ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬುವ ಅವಶ್ಯಕತೆ ಇಲ್ಲ ಎಂದರು.
ಬಂಗಾರಪ್ಪನವರು ಸಿಎಂ ಆಗಿದ್ದಾಗ ನಾನು ಸಚಿವನಾಗಿದ್ದೆ ಅಂದು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದನು ರದ್ದು ಮಾಡಿದ್ದೇವಾ? ಜನಹಿತ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಯಾವಾಗಲೂ ಮುಂದುವರಿಸಿಕೊಂಡು ಬರುತ್ತದೆ ಎಂದರು.
ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದು, ಅದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಪ್ರತಿಕ್ರಿಯೆಗಳಿಗೆ ನಾನು ಬದ್ದನಾಗಿದ್ದೇನೆ. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪನವರು ಹೇಳಿದ ತಕ್ಷಣ ಉತ್ತರ ಕೊಡಲು ಆಗುತ್ತದಾ ಎಂದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಪ್ರಸ್ತಾಪ ನಡೆದಿಲ್ಲ. ಬೆಂಗಳೂರಿಗಾಗಿ ಮೇಕೆದಾಟು ಯೋಜನೆ, ಆರಂಭಗೊಳ್ಳುತ್ತಿದೆ ಎಂದರು.