ರಾಜ್ಯದಲ್ಲೇ ಮಾದರಿಯಾದ ಭದ್ರಾವತಿ ಮಾಜಿ ಸೈನಿಕರ ಸಂಘದ ಸಾಧನೆ
ವಿಶೇಷ ಬರಹ: ಗಜೇಂದ್ರಸ್ವಾಮಿ
ದೇಶ ಕಾಯುವ ಸೈನಿಕರ ಬಗ್ಗೆ ಇಡೀ ನಾಡು ಅತ್ಯಂತ ವಿಶೇಷವಾಗಿ ಗುರುತಿಸುತ್ತಾರೆ. ತಾಯಿಯಂತೆ ದೇಶವನ್ನು ಪ್ರೀತಿಸುವ ಭಾರತೀಯರು, ಅದರಂತೆ ದೇಶ ಕಾಯುವ ಸೈನಿಕರನ್ನು ಗುರುತಿಸಿ ಗೌರವಿಸುತ್ತಾರೆ. ಇದೇ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ದೇಶ ಕಾಯುವಲ್ಲಿ ಯಶಸ್ವಿಯಾಗಿ ನಿವೃತ್ತರಾದ ಸೈನಿಕರೂ ಸಹ ಅದೇ ಗೌರವಾನ್ವಿತರಾಗಿ ನಮ್ಮ ನಡುವೆ ಬದುಕು ಕಟ್ಟಿಕೊಂಡಿದ್ದಾರೆ.
ಈ ದೇಶ ಕಾದ ಮಾಜಿ ಯೋಧರ ಸಾಧನೆಗಳು ಅಪಾರ. ಅದರಲ್ಲೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮಾಜಿ ಸೈನಿಕರ ಸಂಘ ಇಡೀ ರಾಜ್ಯದಲ್ಲೇ ಅತ್ಯಂತ ವಿಭಿನ್ನವಾಗಿ ಗುರುತಿಸಿಕೊಂಡದ್ದು ತಮ್ಮೂರಿನ ಸರಹದ್ದಿನಲ್ಲಿ ಸೈನಿಕರನ್ನು ರೂಪಿಸಿಕೊಡುವ ಮಹಾನ್ ಕಾರ್ಯದಲ್ಲಿ ಮುಂದಾಗಿದೆ. ಅದೂ ಉಚಿತವಾಗಿ ಸೇನೆ, ಪೊಲೀಸ್, ಅರಣ್ಯ ಇಲಾಖೆಗಳ ಉದ್ಯೋಗಕ್ಕೆ ಹೋಗುವವರಿಗೆ ಒಂದೆಡೆ ಸೇರಿಸಿಕೊಂಡು ಅವರಿಗೆ ಅತ್ಯಗತ್ಯವಾಗಿ ಅಗತ್ಯವಿರುವ ದೈಹಿಕ ಆತ್ಮಶಕ್ತಿ ತುಂಬಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಸಜ್ಜುಗೊಳಿಸಿಕೊಡುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದೆ.
ಭದ್ರಾವತಿಯ ಈ ಮಾಜಿ ಸೈನಿಕರ ಸಂಘದಲ್ಲಿ ಕನಿಷ್ಟ 180 ಮಾಜಿ ಸೈನಿಕರಿದ್ದಾರೆ. ನಿವೃತ್ತಿನಂತರ ದೇಶ ಹಾಗೂ ನನ್ನೂರಿಗೆ ಏನಾದರೊಂದಿಷ್ಟು ಮಾಡಬೇಕೆಂದು ಹಠ ತೊಟ್ಟ ಈ ಸಂಘ ಆಯ್ಕೆ ಮಾಡಿದ್ದು ಇಲ್ಲಿನ ಮಕ್ಕಳನ್ನು, ಆಕಾಂಕ್ಷಿಗಳನ್ನು ತಯಾರು ಮಾಡಿಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಕಳೆದ ನವೆಂಬರ್ ಹದಿನೆಂಟರಿಂದ ಇಂದಿನರೆಗೂ ನಿರಂತರವಾಗಿ ಭದ್ರಾವತಿ ವಿ.ಐ.ಎಸ್.ಎಲ್. ಕ್ರೀಡಾಂಗಣದಲ್ಲಿ ಬೆಳಿಗ್ಗೆ ಏಳರಿಂದ ಎಂಟು ಮುವತ್ತರವರೆಗೆ ಸುಮಾರು ಅರವತ್ತಕ್ಕೂ ಹೆಚ್ಚು ಯುವಕರಿಗೆ ಇದೇ ಸಂಘದ ಸದಸ್ಯರು ತರಬೇತಿ ನೀಡುತ್ತಿದ್ದಾರೆ.
ಇಲ್ಲಿ ಪ್ರತಿವಾರಕ್ಕೊಮ್ಮೆ ಪ್ರತಿ ಯುವಕನ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುತ್ತದೆ. ಅಂತೆಯೇ ಕಡಿಮೆ ಸಾಮರ್ಥ್ಯ ಹೊಂದಿದ ಯುವಕನನ್ನು ಹೇಗೆ ತಯಾರುಗೊಳಿಸಬಹುದೆಂದು ಚಿಂತಿಸಿ ಆತ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಗೆದ್ದುಬರುವಂತೆ ಮಾಡುವ ಉದ್ದೇಶ ಈ ಫಲ ನೀಡುವಂತೆ ಮಾಡಿದೆ.
ಅತ್ಯಂತ ಕಡಿಮೆ ಪರಚಾರದಲ್ಲಿ ಅರ್ಧ ಶತಕಕ್ಕೂ ಹೆಚ್ಚುಯುವಕರಿಗೆ ತಬೇತಿ ನೀಡಲಾಗುತ್ತಿದೆ. ಇಲ್ಲಿ ನಿರಂತರತೆ ಕಾಪಾಡಲು ಹಾಗೂ ಶಿಸ್ತು ಬೆಳೆಸಲು ಹಾಜರಾತಿ ಪಡೆಯಲಾಗುತ್ತದೆ. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಎಳ್ಳಿ ಹಾಗೂ ಕಾರ್ಯದರ್ಶಿ ವೆಂಕಟೇಶ್ ಗಿರಿ ಅವರ ನೇತೃತ್ವದಲ್ಲಿ ನೀಡುತ್ತಿರುವ ತರಬೇತಿ ಪಡೆದ ಪ್ರತೀಕ್ ಎಂಬುವವರು ಬೆಳಗಾವಿಯಲ್ಲಿ ನಡೆದ ಸೈನಿಕರ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗಿರುವ ಯುವಕರಲ್ಲಿ ಸುಮಾರು 70 ಭಾಗ ಯುವಕರು ಬರುವ ಬರುವ ಜನವರಿ 18ರಂದು ಉಡುಪಿಯಲ್ಲಿ ನಡೆಯಲಿರುವ ಸೈನಿಕರ ಆಯ್ಕೆಯ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೇ ಸಂಘದ ಹಿರಿಯ ಹಾಗೂ ಅನುಭವಿಗಳ ತಂಡ ನಿರಂತರವಾಗಿ ಬೆಳಿಗ್ಗೆ ಐದಕ್ಕೆ ಈ ಮೈದಾನಕ್ಕೆ ಬಂದು ಹೊಸ ಸೈನಿಕರ ಸೇರ್ಪಡೆಗೆ ತರಬೇತಿ ನೀಡುತ್ತಿದ್ದಾರೆ. ಅದೂ ಯಾವುದೇ ಶುಲ್ಕವಿಲ್ಲದೇ ಸ್ವಂತ ಶ್ರಮ ಹಾಗೂಧನ ಸಹಾಯ ಬಳಸಿಕೊಂಡು ತರಬೇತಿ ನೀಡುತ್ತಿರುವುದು ಇಡೀ ರಾಜ್ಯದಲ್ಲೇ ಮಾದರಿಯಾದುದಾಗಿದೆ.
ಭದ್ರಾವತಿ ಡಿವೈಎಸ್ಪಿ ಕೃಷ್ಣಮೂರ್ತಿ ಅವರು ಇಂತಹ ತರಬೇತಿ ನೀಡುವ ಸ್ಥಳಕ್ಕೆ ಬೇಟಿ ನೀಡಿ ಮಾಜಿ ಸೈನಿಕರ ಸಂಘದ ಈ ಕ್ರಮವನ್ನು ಶ್ಲಾಘಿಸಿದರು. ಉಚಿತವಾಗಿ ದೈಹಿಕ ಸಾಮರ್ಥ್ಯದ ಪರೀಕ್ಷೆಗೆ ತಯಾರುಗೊಳಿಸುವ ಕಾರ್ಯದಿಂದ ಈ ಬಾಗದ ಯುವಕರು ಸೈನ್ಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಸೇಇ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆಂದರು.