ಶಿವಮೊಗ್ಗ, ಡಿ.೧೩:

ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದ ಅಕ್ಕಮಹಾದೇವಿ ಜನ್ಮ ಸ್ಥಳದ ಕೋಟೆಯ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆಯಲ್ಲಿ ಶಿವಪ್ಪನಾಯಕ ಅರಮನೆ ಮತ್ತು ಪುರಾತತ್ವ ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿದೇಶಕ ಆರ್. ಶೇಜೇಶ್ವರ ಹಾಗೂ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪೂರ್ಣಿಮಾ, ರಮೇಶ ಹಿರೇಜಂ ಬೂರು, ಬಿಚ್ಚುಗತ್ತಿ ಶ್ರೀಪಾದ, ಮಂಜು ನಾಥ ಹೆಗಡೆ ಇವರು ಕ್ಷೇತ್ರಕಾರ್ಯ ಕೈಗೊಂಡಾಗ ಕ್ರಿ.ಶ. ೧೨ನೇ ಶತಮಾನದ ಉಡುತಡಿ ಕೋಟೆಯ ಪ್ರದೇಶದಲ್ಲಿ ಗಜಲಕ್ಮೀ ಪಟ್ಟಿಕೆ, ಮಡಿಕೆಯ ಹಾಗೂ ಹೆಂಚುಗಳ ಚೂರುಗಳು ದೊರೆತಿವೆ.


ಈ ಕೋಟೆಯ ಪೂರ್ವ ಭಾಗದ ಬಲ ಬುರುಜಿನ ಹತ್ತಿರ ಬಿಜ್ಜಳ ಅರಸನ ದಂಡನಾಯಕ ಕಸಪಯ್ಯ ನಾಯಕನ ತೃಟಿತವಾದ ಶಾಸನ ಪತ್ತೆಯಾಗಿದ್ದು, ಈ ಶಾಸನವು ೧೧೪ ಸೆಂ.ಮೀ ಉದ್ದ ಹಾಗೂ ೩೦ ಸೆಂ.ಮೀ ಅಗಲವಾಗಿದ್ದು, ಮೇಲ್ಭಾಗ ದಲ್ಲಿ ಸ್ವಲ್ಪ ಭಾಗ ತುಂಡಾಗಿದ್ದು ಕೆಳಭಾಗ ಹಾಗೂ ಎಡ ಭಾಗದಲ್ಲಿ ಅಕ್ಷರಗಳು ತೃಟಿತವಾಗಿರುವುದು ಕಂಡುಬರುತ್ತದೆ.
ಶಾಸನದ ಮಹತ್ವ:
ಶಾಸನದಲ್ಲಿ ೧೭ ಸಾಲುಗಳು ಮಾತ್ರ ಕಂಡುಬರುತ್ತಿದ್ದು, ಇದರಲ್ಲಿ ಕಲಚೂರಿ ಬಿಜ್ಜಳ ಅರಸನ ಮಹಾದಂಡನಾಯಕ ಕಸಪಯ್ಯ ನಾಯಕನು ಬಲ್ಲೇಶ್ವರ ದೇವರ ಆರಾಧಕನಾಗಿದ್ದು, ಬ್ರಹ್ಮಪುರಿಗೆ ಅಂದರೆ ಬ್ರಾಹ್ಮಣರ ಅಗ್ರಹಾರಕ್ಕೆ ೮ ಗದ್ಯಾಣ ನಾಣ್ಯಗಳನ್ನು ದಾನ ನೀಡಿರುವುದು ತಿಳಿದುಬರುತ್ತದೆ. ಈ ಶಾಸನವು ಕ್ರಿ.ಶ. ೧೧೫೦-೬೮ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದ್ದು, ಇದರಲ್ಲಿ ದಂಡನಾಯಕ ಕಸಪಯ್ಯ ನಾಯಕನ ಉಲ್ಲೇಖವಿದೆ. ಇವನು ಕ್ರಿ.ಶ. ೧೧೫೦ -೬೮ರ ಅವಧಿಯಲ್ಲಿ ಬಿಜ್ಜಳ ಅರಸನ ದಂಡನಾಯಕನಾಗಿ ಬನವಾಸಿ-೧೨೦೦೦ ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವುದು ಆನೇಕ ಶಾಸನಗಳಲ್ಲಿ ಉಲ್ಲೇಖವಿದೆ.


ಹಿಂದೆ ಕಸಪಯ್ಯ ನಾಯಕನನ್ನು ಅಕ್ಕಮಹಾದೇವಿಯ ಪತಿ “ಕೌಶಿಕ” ಮಹಾರಾಜ ಇರಬಹುದೆಂದು ದೇವರ ಕೊಂಡರೆಡ್ಡಿ ಹಾಗೂ ಚಿದಾನಂದಮೂರ್ತಿ ಯವರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯ ಕೋಟೆಯಲ್ಲಿಯೇ ಕಸಪಯ್ಯ ನಾಯಕನ ಶಾಸನ ದೊರೆ ತಿರುವುದರಿಂದ ಇವರೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ದೊರೆತಿದೆ.
ಇದು ಅಕ್ಕಮಹಾದೇವಿ ಜನ್ಮ ಸ್ಥಳಕ್ಕೆ ಐತಿಹಾಸಿಕ ಮಹತ್ವದ್ದಾಗಿದೆ ಎಂದು ಆರ್. ಶೇಜೇಶ್ವರ ಸಹಾಯಕ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!