ಶಿವಮೊಗ್ಗ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಿಗೆ ನೆರವಾಗುವ ದೃಷ್ಠಿಯಿಂದ ನಿರ್ಮಿಸಿರುವ ಸಮನ್ವಯ ಟ್ರಸ್ಟ್‌ನ ನೂತನ ಕಟ್ಟಡ ಕೆ.ಎ.ದಯಾನಂದ ಐಎಎಸ್ ವಾಚನಾಲಯ ಲೋಕಾರ್ಪಣೆಯು ನವೆಂಬರ್ ೨೫ರಂದು ಬೆಳಗ್ಗೆ ೧೧.೩೦ಕ್ಕೆ ನಡೆಯಲಿದೆ.
ಸಮನ್ವಯ ಟ್ರಸ್ಟ್ ಎರಡು ದಶಕಗಳಿಂದ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅತ್ಯಂತ ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದೀಗ ಮಲೆನಾಡು ಭಾಗದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳ ಕನಸು ನನಸು ಮಾಡುವ ದಿಸೆಯಲ್ಲಿ ವಿಶೇಷ ಪ್ರಯತ್ನಕ್ಕೆ ಸಮನ್ವಯ ಟ್ರಸ್ಟ್ ಮುಂದಾಗಿದೆ.


ಉತ್ತಮ ಆಡಳಿತ ಹಾಗೂ ಸಮಾಜಮುಖಿ ಆಲೋಚನೆಗಳ ಮೂಲಕ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎ.ದಯಾನಂದ, ಐಎಎಸ್ ಅವರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯವನ್ನು ಸಮನ್ವಯ ಟ್ರಸ್ಟ್ ನಿರ್ಮಾಣ ಮಾಡಿದೆ. ಸಮನ್ವಯ ಟ್ರಸ್ಟ್ ಸ್ವಯಂಸೇವಕರೇ ಕೈಜೋಡಿಸಿ ನಿರ್ಮಾಣ ಮಾಡಿರುವುದು ವಿಶೇಷ.


ಸಮನ್ವಯ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ನೂತನ ಕಟ್ಟಡಕ್ಕೆ ಕೆ.ಎ.ದಯಾನಂದ ಐಎಎಸ್, ರಾಜ್ಯದ ಮೊದಲ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯ ಎಂದು ಹೆಸರಿಡಲಾಗಿದೆ. ಅಲ್ಲಮ ಪ್ರಭು ಜ್ಞಾನ ಮಂದಿರ, ಅತಿಥಿಗೃಹ, ಕುವೆಂಪು ಅಂಗಳ ಹಾಗೂ ಸಮನ್ವಯ ಕಾರ್ಯಾಲಯ ಕೂಡ ಹೊಸ ಕಟ್ಟಡದಲ್ಲಿ ಇರಲಿದೆ.


ಸಮನ್ವಯ ಟ್ರಸ್ಟ್ ನೂತನ ಕಟ್ಟಡದ ಲೋಕಾರ್ಪಣೆಯು ನವೆಂಬರ್ ೨೫ರ ಬೆಳಗ್ಗೆ ೧೧.೩೦ಕ್ಕೆ ನಡೆಯಲಿದ್ದು, ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು, ಗೋಣಿಬೀಡಿನ ಡಾ. ಸಿದ್ಧಲಿಂಗ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ರಾಮಕೃಷ್ಣ ಆಶ್ರಮ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಅವರು ಕಟ್ಟಡದ ಲೋಕಾರ್ಪಣೆ ನಡೆಸಿಕೊಡಲಿದ್ದಾರೆ.


ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಪಂಚಭಾಷಾ ನಟಿ ಪ್ರೇಮಾ, ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಉಪಸ್ಥಿತರಿರುವರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸು

ವರು. ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು ಭಾಗವಹಿಸುವರು.
ಮೊದಲ ವಿಶೇಷ ಕಾರ್ಯಕ್ರಮ: ಸಮನ್ವಯದ ನೂತನ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಜತೆ ಸಂವಾದವು ನವೆಂಬರ್ ೨೫ರ ಸಂಜೆ ೫ಕ್ಕೆ ನಡೆಯಲಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಐಎಎಸ್ ತರಬೇತುದಾರರಾದ ಆಯಿಷಾ ಪರ್ಝಾನ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ, ಟ್ರಸ್ಟಿ ವಿಕ್ರಮ್.ಎ.ವಿ. ಉಪಸ್ಥಿತರಿರುವರು. ಸಂವಾದದಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತರು ೮೭೯೨೪೩೫೪೦೨ ಸಂಪರ್ಕಿಸಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!