ಗಣಪತಿ ಕೆರೆ ಅಭಿವೃದ್ದಿಯಲ್ಲಿ ದೊಡ್ಡಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಕಳಪೆ ಕಾಮಗಾರಿಯಿಂದ ಕೆರೆಯ ಮೂಲಕ್ಕೆ ಧಕ್ಕೆ ಉಂಟಾಗಿದೆ ಎಂದು ಆಮ್ ಆದ್ಮಿ ಪಕ್ಷದ ಸಾಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೆ.ದಿವಾಕರ್ ತಿಳಿಸಿದರು.
ಇಲ್ಲಿನ ಗಣಪತಿ ಕೆರೆ ಪ್ರದೇಶಕ್ಕೆ ಮಂಗಳವಾರ ಸಾರ್ವಜನಿಕರು ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, ಗಣಪತಿ ಕೆರೆ ವಿರೂಪಗೊಳಿಸಿ ಅಭಿವೃದ್ದಿ ಮಾಡುವ ಅಗತ್ಯ ಏನಿದೆ. ಆರೂವರೆ ಕೋಟಿ ಹಣದಲ್ಲಿ ಶೇ. ೪೦ ಕಮೀಷನ್ಗಾಗಿ ಕೆರೆ ಅಭಿವೃದ್ದಿ ಮಾಡಲಾಗುತ್ತಿದೆ ಎಂದು ದೂರಿದರು.
ಕೆರೆ ಅಭಿವೃದ್ದಿ ಭ್ರಷ್ಟಾಚಾರದ ಮುಂದುವರೆದ ಭಾಗ. ಸರ್ಕಾರದ ತೆರಿಗೆ ಹಣದಲ್ಲಿ ಕೆರೆ ಅಭಿವೃದ್ದಿ ಮಾಡಲಾಗುತ್ತಿದೆಯೆ ವಿನಃ, ಶಾಸಕ ಹಾಲಪ್ಪ ಜೇಬಿನಿಂದ ದುಡ್ಡು ಹಾಕಿ ಅಭಿವೃದ್ದಿ ಮಾಡಲಾಗುತ್ತಿದೆ. ಗಣಪತಿ ಕೆರೆ ೩೦ ಎಕರೆ ಇದೆ ಎಂದು ಹೇಳಲಾಗುತ್ತಿದೆ. ೩೦ ಎಕರೆ ಎಲ್ಲಿದೆ ಎನ್ನುವುದನ್ನು ಶಾಸಕರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಹಿಂದಿನ ಜನಪ್ರತಿನಿಧಿಗಳು ಇದ್ದಾಗಲೂ ಸಾಗರ ಕ್ಷೇತ್ರದ ಅಭಿವೃದ್ದಿ ಆಗಿದೆ. ಹಾಲಪ್ಪ ಅವರು ಎಂಎಸ್ಐಎಲ್ ಮದ್ಯದಂಗಡಿ ತೆರೆದದ್ದು ಬಿಟ್ಟರೆ ಅಭಿವೃದ್ದಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಒಳಚರಂಡಿ ಕಾಮಗಾರಿ ಮಾಡಿದ್ದರೂ ಅದು ಯೋಜನಾಬದ್ದವಾಗಿ ಮಾಡಿಲ್ಲ. ಹಾಲಪ್ಪ ಅವರ ಜೊತೆ ಅಭಿವೃದ್ದಿ ಕುರಿತು ಚರ್ಚೆ ಮಾಡಲು ನಾವು ಸಿದ್ದರಾಗಿದ್ದೇವೆ. ಕೆರೆ ಒತ್ತುವರಿ ಮಾಡಿದವರನ್ನು ತೆರವುಗೊಳಿಸಿ ಅಭಿವೃದ್ದಿ ಮಾಡಬೇಕಾಗಿತ್ತು. ಕೆರೆ ನೀರು ಖಾಲಿ ಮಾಡಿ, ಶರಾವತಿ ನೀರು ತುಂಬಿಸಿ, ಕೃತಕ ಕೊಳವಾಗಿ ಗಣಪತಿ ಕೆರೆಯನ್ನು ಪರಿವರ್ತನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸತೀಶ್ ಗೌಡ, ವಿಜಯಕುಮಾರ್, ದರ್ಶನ್ ಜೈನ್, ಕಿರಣ್, ಅಬ್ದುಲ್ ರಜಾಕ್, ಜೋಸೆಫ್, ವೀಣಾ ನಾಯ್ಡು, ವಿನಯ್, ಚಂದ್ರಶೇಖರ್, ಆರೀಫ್, ಸಂಜಯ್, ಶರತ್ ಇನ್ನಿತರರು ಹಾಜರಿದ್ದರು.