ಶಿವಮೊಗ್ಗ,
ನಗರದ ಫ್ರೀಡಂ ಪಾರ್ಕ್‌ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆಧುನಿಕ ಟಚ್ ನೀಡಿ ಉತ್ತಮ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗು ವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.


ಅವರು ಇಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳೊಂದಿಗೆ ಫ್ರೀಡಂ ಪಾರ್ಕ್ ಅವ್ಯವಸ್ಥೆಗಳನ್ನು ಪರಿಶೀಲಿಸಿ ಸಾರ್ವಜನಿಕರಿಂದ ಮಾಹಿತಿ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದ ಮಧ್ಯದಲ್ಲಿರುವ ವಿಶಾಲವಾದ ೪೫ ಎಕರೆ ಜಾಗ ಬಂಧೀಖಾನೆ ಇಲಾಖೆ ಸೇರಿದ್ದು, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಗರದ ನಾಗರೀಕರಿಗೆ ಅನುಕೂಲವಾಗಬೇಕೆನ್ನುವ ದೃಷ್ಟಿಯಿಂದ ಸಭೆ, ಸಮಾರಂಭ ನಡೆಸಲು ಮತ್ತು ವಾಯು ವಿಹಾರಕ್ಕೆ ನಗರದ ಮಧ್ಯದಲ್ಲಿ ಸೂಕ್ತ ಸ್ಥಳವೆಂಬುದನ್ನು ಗಮನಿಸಿ ಸರ್ಕಾರ ಮಟ್ಟದಲ್ಲಿ ಅವಿರತ ಪ್ರಯತ್ನ ಮಾಡಿದ್ದರು. ಫ್ರೀಡಂ ಪಾರ್ಕ್ ಅನ್ನು ಬಹುಕೋಟಿ ವೆಚ್ಚ ದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಾಣ ಮಾಡಲಾಗಿತ್ತು ಎಂದರು.


ಇತ್ತೀಚೆಗೆ ಪ್ರೀಡಂ ಪಾರ್ಕ್ ನಿರ್ವಹಣೆ ಸರಿಯಿಲ್ಲ ಎಂದು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಂಸದರು ಖುದ್ದಾಗಿ ದಿಢೀರ್ ಭೇಟಿ ನೀಡಿ, ವಾಸ್ತವ ಸ್ಥಿತಿ ತಿಳಿದು, ಇಂದು ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂ ಡಿದ್ದರು.
ಪ್ರಮುಖವಾಗಿ ವಾಕಿಂಗ್ ಪಾತ್ ಅಸಮರ್ಪಕ ನಿರ್ವಹಣೆ, ವಿದ್ಯುತ್ ದೀಪ ಕೊರತೆ, ಶೌಚಾಲಯದ ನಿರ್ವಹಣೆಯಲ್ಲಿ ಲೋಪ, ಭದ್ರತಾ ಸಿಬ್ಬಂದಿಗಳ ಕೊರತೆ, ಪುಂಡುಪೋಕರಿಗಳ ಹಾವಳಿ, ವಾಕಿಂಗ್ ಪಾತ್‌ನಲ್ಲಿ ದ್ವಿಚಕ್ರವಾಹನ ಸವಾರರು ಜೋರಾಗಿ ಓಡಿಸುವುದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿರುವುದು, ಅನೈತಿಕ ಚಟುವಟಿಕೆಗಳ ತಾಣವಾಗಿರುವುದು. ಅಲ್ಲದೇ ಇತ್ತೀಚೆಗೆ ಪಾಲಿಕೆಯ ಗಾರ್ಬೆಜ್ ಅನ್ನು ಕೂಡ ತಂದು ಇಲ್ಲಿ ಸುರಿಯುತ್ತಿರುವು ದರ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.


ಅಲ್ಲದೇ ಇಡೀ ನಗರದ ವೇಸ್ಟೇಜ್ ಮಣ್ಣು, ಕಲ್ಲುಗಳನ್ನು ತಂದು ಇಲ್ಲಿ ಸುರಿಯುತ್ತಿದ್ದು, ಆ ಸಂದರ್ಭದಲ್ಲಿ ಓಡಾಡುವ ಟ್ರ್ಯಾಕ್ಟರ‍್ಗಳಿಂದ ಭದ್ರತಾ ಲೋಪ ಮುಂತಾದುವನ್ನು ಸಂಸದರ ಗಮನಕ್ಕೆ ತರಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ನಮ್ಮ ತಂದೆಯವರ ಬಹುದೊಡ್ಡ ಕನಸು ಒಂದು ಉತ್ತಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಕಾರಣವಾಯಿತು. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೌಚಾಲಯಕ್ಕೆ ಟೆಂಡರ್ ಕರೆದು, ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ರಾತ್ರಿ ೮ ಗಂಟೆ ವರೆಗೆ ವಾಕಿಂಗ್‌ಗೆ ಅವಕಾಶ ನೀಡಲಾಗುವುದು. ಎರಡು ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದರು.


ಸುಮಾರು ೫ ಕೋಟಿ ಅನುದಾನವನ್ನು ಈ ಪಾರ್ಕ್‌ಗೆ ನೀಡಲಾಗುವುದು. ಅದರಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಇನ್ನೂ ಸುಂದರ ಮತ್ತು ಸ್ವಚ್ಛ ಪ್ರೀಡಂ ಪಾರ್ಕ್ ಅಭಿವೃದ್ಧಿ ಪಡಿಸಿ, ಆಧುನಿಕ ಸ್ಪರ್ಶ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಉಪಮೇಯರ್ ಶಂಕರ್ ಗನ್ನಿ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಎಂಡಿ ಚಿದಾನಂದ ವಟಾರೆ, ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಇ. ವಿಶ್ವಾಸ್, ಪ್ರಮುಖರಾದ ಎಸ್. ದತ್ತಾತ್ರಿ, ದಿವಾಕರ್ ಶೆಟ್ಟಿ, ಸಿ.ಹೆಚ್. ಮಾಲತೇಶ್, ಬಿ.ಎಂ. ಕುಮಾರಸ್ವಾಮಿ, ಪ್ರೊ. ಚಂದ್ರಶೇಖರ್, ಮಂಜುನಾಥ್, ಬಳ್ಳೆಕೆರೆ ಸಂತೋಷ್, ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.
ನಂತರ ಸಂಸದರು ಕಾಶಿಪುರ ಮತ್ತು ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದರು. ಅಕ್ಕಪಕ್ಕದ ನಿವಾಸಿಗಳಿಗೆ ಕಾಮಗಾರಿಯಿಂದ ತೊಂದರೆಯಾಗುತ್ತಿರುವುದರಿಂದ ಸರ್ವೀಸ್ ರಸ್ತೆ ಕಾಮಗಾರಿಯನ್ನು ತಿಂಗಳೊಳಗೆ ಮುಗಿಸಲು ಸೂಚನೆ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!