ಪ್ರತಿ ವರ್ಷ ಸಂಭವಿಸುತ್ತಿರುವ ಮಳೆಯಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂತೆ ಕಡೂರು ಸಹ್ಯಾದ್ರಿ ಕಾಲೇಜ್ ಮುಖಾಂತ ರವಾಗಿ ಹರಿದು ಬರುವ ತುಂಗಾ ನಾಲದ ಹೆಚ್ಚುವರಿ ನೀರು ವಾಸ್ತವವಾಗಿ ಗುರುಪುರ ನಾಲದ ಮೂಲಕ ಸಾಗಿ ಪುರಲೆ ಕೆರೆಗೆ ಸೇರಬೇಕಾಗಿರುತ್ತದೆ ಆದರೆ ಪ್ರಸ್ತುತ ೨೦೧೮-೨೦೧೯ ರಲ್ಲಿ ಗುರುಪುರ ನಾಲದಲ್ಲಿ ತಡೆ ಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದ ೨೦ ಅಡಿ ಅಗಲ ಹೊಂದಿದ್ದ ನಾಲ ೮ ರಿಂದ ೧೦ ಅಡಿ ಅಗಲಕ್ಕೆ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದಾಗಿ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಳೆಗಾಲದಲ್ಲಿ ಸಂಭವಿಸುವ ಪ್ರತಿಯೊಂದು ಮಳೆಗು ಸಹ ತುಂಗಾ ನಾಲದ ನೀರು ಹೆಚ್ಚುವರಿಯಾಗಿ ಹರಿದು ಬರುವುದರಿಂದ ಹಾಗೂ ಆ ಸಮಯದಲ್ಲಿ ಹರಿಗೆ ಕೆರೆಯ ಕೋಡಿ ನೀರು ಕೂಡ ಇದೇ ನಾಲದ ಮೂಲಕ ಹರಿದು ಬರುತ್ತದೆ. ಇಷ್ಟು ಪ್ರಮಾಣದ ನೀರು ನಾಲ ಕಿರಿದಾಗಿರುವ ಹಾಗೂ ನೀರು ಹರಿದು ಹೋಗಲು ಸಾಕಷ್ಟು ಇಳಿಜಾರು ಇಲ್ಲದೆ ಆ ನಾಲದಲ್ಲಿ ೪ ಅಡಿ ಮಟ್ಟದ ನೀರು ಶೇಕರಣೆಯಾಗಿ ಹರಿಗೆ ಕೆರೆ ಹಾಗೂ ತುಂಗಾ ನಾಲದಿಂದ ಹರಿದು ಬರುವ ನೀರನ್ನು ಸರಾಗವಾಗಿ ಹಾದು ಹೋಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ತುಂಗಾ ನಾಲಗೆ ೨೦೧೮ ರಲ್ಲಿ ನಿರ್ಮಿಸಿರುವ ತಡೆಗೋಡೆ ಅತ್ಯಂತ ಕಿರಿದಾಗಿದ್ದು ಹಾಗೂ ಇಳಿಜಾರು ಇಲ್ಲದಿರುವುದು ಹಾಗೂ ಹರಿಗೆ ಕೆರೆ ಕೋಡಿಯಿಂದ ಬರುವಂತಹ ಹೆಚ್ಚುವರಿ ನೀರು ಕೂಡ ಸಂಪೂರ್ಣವಾಗಿ ರಾಜಕಾಲುವೆಗೆ ಸೇರುತ್ತಿರುವುದು ಆಗಿರುತ್ತದೆ ಇದರಿಂದ ಪ್ರತಿಯೊಂದು ಮಳೆಗಾಲದಲ್ಲು ಅಲ್ಲಿನ ನಾಗರೀಕರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಈ ಸಮಸ್ಯೆಗೆ ಸ್ಪಂದಿಸಿ ನಾಗರೀಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಂಗೇಗೌಡ, ಸೋಮಣ್ಣ, ಬಾಬು, ಶೋಭಾ ಹಾಗೂ ೧೪ನೇ ವಾರ್ಡ್ನ ನಾಗರೀಕರು ಭಾಗವಹಿಸಿದ್ದರು.