ಗಜೇಂದ್ರ ಸ್ವಾಮಿ, ಸಂಪಾದಕರು
ಶಿವಮೊಗ್ಗ, ಮಾ.27:
ನಾಳೆ ಅಂದರೆ ಮಾ.28ರಂದು ಜೀವನದ ಅತೀ ಮುಖ್ಯ ಮೆಟ್ಟಿಲಾದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮುದ್ದು ಮನಸಿನ ಮುಗ್ದ ಮಕ್ಕಳಿಗೆ ನಿಮ್ಮ ತುಂಗಾತರಂಗ ದಿನಪತ್ರಿಕಾ ಬಳಗ ಆತ್ಮೀಯ ಶುಭಹಾರೈಕೆಯೊಂದಿಗೆ, ನಿಮ್ಮ ನಿರೀಕ್ಷೆ ಮೀರಿದ ಫಲಿತಾಂಶ ದೊರೆತು ಮುಂದಿನ ಬದುಕ ಶಿಕ್ಷಣ ಉಜ್ವವಾಗಲಿ ಎಂದು ಭಗವಂತನಲ್ಲಿ ಕೋರುತ್ತದೆ.
ಹಿಂದಿನ ಹಾಗೂ ಇಂದಿನ ಕಲಿಕೆಯ ಕುರಿತ ನೂರಾರು ಅಭಿಪ್ರಾಯಗಳು ಇಲ್ಲಿ ಬೇಡ. ಇಂದು ಹಿಜಾಬ್ ದೊಡ್ಡ ಚರ್ಚೆಯಾಗುತ್ತಿರುವ ವಿಚಾರವೂ ಇಲ್ಲಿ ಅನಗತ್ಯ ಎಂಬುದನ್ನು ಈ ಪರೀಕ್ಷೆ ಬರೆಯುವ ಮಕ್ಕಳು ಹಾಗೂ ಅವರ ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ ಎಂಬುದು ನಮ್ಮ ಅಭಿಮತ.
ಈ ವಿಚಾರವಾಗಿ ನಮ್ಮ ಮಾದ್ಯಮ ಜಗತ್ತಿನ ಮೂಲಕ ಕಿಡಿಯಚ್ಚುವ ಮಾಹಿತಿ ನೀಡಿ ಪರೀಕ್ಷೆ ಬರೆಯುವ ನಿಮ್ಮ ತಲೆಯಲ್ಲಿ ಹುಳು ಬಿಟ್ಟವರ್ಯಾರೂ ನಿಮ್ಮ ಮುಂದಿನ ಬದುಕು, ಭವಿಷ್ಯ ಕಟ್ಟಿಕೊಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ನಾಳಿನ ಪರೀಕ್ಷೆ ನಿಮ್ಮ ಮುಂದಿನ ಬದುಕಿನ ಹೆಜ್ಜೆಯನ್ನು ನಿರ್ಣಯಿಸುತ್ತದೆ.
ಕಾನೂನನ್ನು ರಕ್ಷಿಸಲು ನ್ಯಾಯಾಂಗ ಇರುವಂತೆ ದರ್ಮವನ್ನು ರಕ್ಷಿಸಲು ದೊಡ್ಡವರಿದ್ದಾರೆ ಎಂದುಕೊಂಡು ಬಿಡಿ. ಇಲ್ಲಿ ಎಲ್ಲದಕ್ಕಿಂತ ಮುಖ್ಯ ಪರೀಕ್ಷೆ ಹಾಗೂ ಮುಂದಿನ ಭವಿಷ್ಯ.
ಹಿಜಾಬ್ ದರಿಸಿ ಬಂದವರಿಗೆ ಪ್ರವೇಶವಿಲ್ಲ. ಮುಂದಿನ ಪರೀಕ್ಷೆಯೂ ಇಲ್ಲ ಎಂಬ ಸಚಿವರ ಮಾತನ್ನೂ ಮಕ್ಕಳಾದ ತಾವು ಗಂಭೀರವಾಗಿ ಪರಿಗಣಿಸದಿರಿ. ನಿಮ್ಮ ಕಣ್ಣ ಮುಂದೆ ನಿಮ್ಮ ಭವಿಷ್ಯದ ಚಿಂತನೆ ಇದ್ದರೆ ಸಾಕು.
ದೃಶ್ಯ ಮಾದ್ಯಮಗಳ ವೈಭವೀಕರಣದತ್ತ ಗಮನಿಸದಿರಿ. ಆಕ್ರೋಶ ಭರಿತ ರಾಜಕಾರಣಿಗಳ ಮಾತನ್ನೂ ಲೆಕ್ಕಿಸದಿರಿ. ಪೋಷಕರ ಮನವೊಲಿಸಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ಮೇಲೆ ಹೊಸ ಚಿಂತನೆ ಮಾಡೋಣ ಅಲ್ಲವೇ?
ಹಿಜಾಬ್, ಪೇಟ, ಸ್ವಾಮೀಜಿಗಳ ತಲೆಯ ವಸ್ತ್ರ, ವೇಲ್ ದರಿಸುವಿಕೆ ಹೆಸರು ಓಡಾಟ ಅದರ ಚರ್ಚೆ, ಎಲ್ಲಾ ಕಡೆಯ ಕೂಗಾಟ, ತಿಕ್ಕಾಟಗಳು ಓದುವ ಮಕ್ಕಳಿಗೆ ಹಾಗೂ ಓದಿಸುವ ಪೋಷಕರಿಗೆ ಬೇಕಿಲ್ಲ. ಹಾಗಾಗಿ ಮೊದಲ ಆದ್ಯತೆ ಪರೀಕ್ಷೆ ಎಂಬುದಾಗಿರಲಿ.
ಪರೀಕ್ಷೆ ಸುಲಭವಾಗಿರುತ್ತೆ.., !
ಕೋವಿಡ್ ತಹಂಬದಿಗೆ ಬಂದಿರುವುದರಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆಯನ್ನು ಕೋವಿಡ್(Covid-19) ಪೂರ್ವ ಮಾದರಿಯಲ್ಲಿ ನಡೆಸಲಾಗುತ್ತಿದೆಯಾದರೂ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಮೊದಲಿನಷ್ಟು ಕಠಿಣ ಮಾದರಿಯಲ್ಲಿ ಶಿಕ್ಷಣ ಇಲಾಖೆ(Department of Education) ಸಿದ್ಧಪಡಿಸಿಲ್ಲ.
ಬದಲಿಗೆ ಕಲಿಕಾ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳ(Students) ಹಿತದೃಷ್ಟಿಯಿಂದ ಅತ್ಯಂತ ಸರಳ ಹಾಗೂ ಸುಲಭ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು(Examination) ರಾಜ್ಯದ 3444 ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಲಿದ್ದು, 8.73 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಮಕ್ಕಳಿಗೆ ಕಳೆದ ಎರಡು ವರ್ಷಗಳಲ್ಲಿ (8 ಮತ್ತು 9ನೇ ತರಗತಿ) ಸಮರ್ಪಕವಾಗಿ ಭೌತಿಕ ತರಗತಿಗಳು ನಡೆದಿಲ್ಲ. ಅವರು ಪರೀಕ್ಷೆ ಇಲ್ಲದೆ ಎಸ್ಸೆಸ್ಸೆಲ್ಸಿಗೆ ಪಾಸಾಗಿ ಬಂದಿದ್ದಾರೆ. ಹೀಗಾಗಿ ಕಲಿಕಾ ಕೊರತೆ ಎದುರಿಸುತ್ತಿದ್ದಾರೆ. ಜತೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ (2021-22) ಆರಂಭದಲ್ಲಿ ಕೆಲ ತಿಂಗಳು ಕೋವಿಡ್ ಕಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಕೋವಿಡ್ ಪೂರ್ವ ಮಾದರಿಯಷ್ಟುಕಠಿಣವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಿದರೆ ಕಷ್ಟವಾಗಬಹುದು ಎಂಬ ತೀರ್ಮಾನಕ್ಕೆ ಬಂದ ಶಿಕ್ಷಣ ಇಲಾಖೆಯು ಸರಳ ಹಾಗೂ ಸಲಭವಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದೆ ಎಂದು ಇಲಾಖೆಯ ಖಚಿತ ಮೂಲಗಳು ತಿಳಿಸಿವೆ.