ಶಿವಮೊಗ್ಗ ಪಾಲಿಕೆ ವ್ಯಾಪ್ತಿ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಪಿಡಬ್ಲ್ಯೂಡಿ ಎಇಇ ಕಿರಣ್ ಕುಮಾರ್’ಗೆ ಮನವಿ
ಶಿವಮೊಗ್ಗ, ಮಾ. 24: ಮಹಾನಗರ ಪಾಲಿಕೆ 1 ನೇ ವಾರ್ಡ್ ನ ಸೋಮಿನಕೊಪ್ಪ – ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ನಡುವಿನ, ರಾಜ್ಯ ಹೆದ್ದಾರಿ ಅಗಲೀಕರಣಗೊಳಿಸಿ ಮೇಲ್ದರ್ಜೆಗೇರಿಸುವಂತೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಕಿರಣ್ ಕುಮಾರ್ ರವರಿಗೆ ಗುರುವಾರ ಮನವಿ ಪತ್ರ ಅರ್ಪಿಸಲಾಯಿತು.
ರಾಜ್ಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ ಪರಿಶೀಲನೆಗೆ ಕಿರಣ್ ಕುಮಾರ್ ರವರು ಸೋಮಿನಕೊಪ್ಪಕ್ಕೆ ಆಗಮಿಸಿದ್ದ ವೇಳೆ, ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಮನವಿ ಪತ್ರ ಅರ್ಪಿಸಲಾಯಿತು.
ಸೋಮಿನಕೊಪ್ಪ-ಪ್ರೆಸ್ ಕಾಲೋನಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ, ಜನ-ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಆದರೆ ರಸ್ತೆಯು ಅತ್ಯಂತ ಕಿರಿದಾಗಿದೆ. ಜೊತೆಗೆ ಅಪಾಯಕಾರಿ ತಿರುವುಗಳಿಂದ ಕೂಡಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯವಾಗುತ್ತಿದೆ. ಈಗಾಗಲೇ ಅಪಘಾತಗಳು ಸಂಭವಿಸಿ, ಸಾವು – ನೋವುಗಳಾಗಿದೆ. ಜೊತೆಗೆ ರಸ್ತೆಯ ಇಕ್ಕೆಲದಲ್ಲಿಯೇ ಮೆಸ್ಕಾಂ ವಿದ್ಯುತ್ ಕಂಬಗಳಿವೆ. ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈಗಾಗಲೇ ನಗರ ವ್ಯಾಪ್ತಿಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ದಿಗೊಳಿಸಲಾಗಿದೆ. ಅದೇ ರೀತಿಯಲ್ಲಿ ನಗರ ವ್ಯಾಪ್ತಿಯ ಸೋಮಿನಕೊಪ್ಪ – ಪ್ರೆಸ್ ಕಾಲೋನಿ ನಡುವಿನ ಸುಮಾರು 1 ಕಿ.ಮೀ. ರಸ್ತೆಯನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ದಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಎಇಇ ಕಿರಣ್ ಕುಮಾರ್ ರವರು, ಈ ರಸ್ತೆಯು ನಗರ ಪರಿಮಿತಿಯಲ್ಲಿರುವುದೆ. ಭೂ ಸ್ವಾದೀನದ ಅಗತ್ಯವೂ ಇಲ್ಲವಾಗಿದೆ. ಸುಮಾರು 1 ಕಿ.ಮೀ. ಉದ್ದದ ರಸ್ತೆ ಅಭಿವೃದ್ದಿಗೊಳಿಸಿ ಕೊಡುವ ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಕೃಷ್ಣಾರೆಡ್ಡಿರವರು ಉಪಸ್ಥಿತರಿದ್ದರು. ಮನವಿ ಅರ್ಪಿಸುವ ಸಂದರ್ಭದಲ್ಲಿ ಪತ್ರಕರ್ತ ಬಿ.ರೇಣುಕೇಶ್, ರಾಜು, ಕೋಟೆಗಂಗೂರು ಗ್ರಾಪಂ ಸದಸ್ಯ ದೂದ್ಯನಾಯ್ಕ್, ಸ್ಥಳೀಯ ನಿವಾಸಿಗಳಾದ ಜಾನಕಿ, ಶ್ರೀಧರ್, ಚಿನ್ಮಯ್, ಐಯಾತ್ ಸಾಬ್ ಸೇರಿದಂತೆ ಮೊದಲಾದವರಿದ್ದರು.