ಶಿವಮೊಗ್ಗ: ನಾವು ಮಾಡುವ ಯಾವುದೇ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ಹಣ ಮಾಡುವುದೇ ನಮ್ಮ ಉದ್ದೇಶವಾಗಬಾರದು. ಗಳಿಸಿದ್ದರಲ್ಲಿ ಅಲ್ಪ ಪ್ರಮಾಣವನ್ನಾದರೂ ಸಮಾಜಕ್ಕೆ ಮರಳಿ ಕೊಡಬೇಕು. ಈ ಮೂಲಕ ವ್ಯವಹಾರದಲ್ಲಿ ಸಾರ್ಥಕತೆ ಪಡೆಯಬೇಕು ಎಂದು ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚ್ಚುತ್ ಗೌಡ ಹೇಳಿದರು.
ನಗರದ ಪೆಸಿಟ್ ಕಾಲೇಜಿನಲ್ಲಿ ಜರುಗುತ್ತಿರುವ ರೋಟರಿ 3182 ಜಿಲ್ಲಾ ಸಮಾವೇಶ ರಾಮ ಸಂಭ್ರಮ-2022 ಕಾರ್ಯಕ್ರಮದ ಎರಡನೇ ದಿನವಾದ 12-03-2022ರ ಶನಿವಾರ ಡಿಕ್ಲರೇಷನ್ ಆಫ್ ರೋಟೇರಿಯನ್ಸ್ ಇನ್ ಬ್ಯುಸಿನೆಸ್ ಅಂಡ್ ಫ್ರೊಫೆಷನ್ಸ್ ಎಂಬ ವಿಷಯ ಕುರಿತು ಮಾತನಾಡಿದರು.
ಯಾವುದೇ ಆಗಲಿ ಛಲದಿಂದ ಕೆಲಸ ಮಾಡಿದರೆ ಅದನ್ನು ಸಾಧಿಸಬಹುದು. ನಮ್ಮ ಮಿತಿಯನ್ನು ಯಾವತ್ತೂ ಇಷ್ಟೇ ಎಂದು ಅಂದುಕೊಳ್ಳಬಾರದು. ಆಕಾಶ ಎಷ್ಟು ಅನಂತವಾಗಿದೆಯೋ ಅಷ್ಟೂ ನಮ್ಮ ಮಿತಿಯಾಗಿರಲಿ. ಆಗಲೇ ನಮ್ಮ ಪ್ರಯತ್ನಕ್ಕೆ ಒಂದು ಅರ್ಥ ಸಿಗುತ್ತದೆ ಎಂದರು.


ಸಂಸ್ಥೆಗೆ ನಾನು ಮಾಲೀಕನಲ್ಲ. ನಾನು ಕೇವಲ ಮೊದಲ ಕೆಲಸಗಾರ ಅಷ್ಟೇ. ದುಡಿಯುತ್ತಿರುವ ಎಲ್ಲರೂ ಮಾಲೀಕರೇ ಎಂದು ತಮ್ಮ ಸಂಸ್ಥೆಯ ಉದ್ಯೋಗಿಗಳ ಬಗ್ಗೆ ಅಭಿಮಾನದಿಂದ ಹೇಳಿದರಲ್ಲದೆ ಪುಟ್ಟ ಹಳ್ಳಿಯಿಂದ ಬೆಟ್ಟದಷ್ಟು ಕನಸು ಹೊತ್ತು ಬೆಂಗಳೂರಿಗೆ ಬಂದು ಕೆಲಸಕ್ಕೆ ಬೀದಿ ಬೀದಿ ಅಲೆದು ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ನಂತರ ತಾನೇ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿಯನ್ನು ಕೇಳಿದ ಸಭಿಕರು ಮನಸಾರೆ ಕರತಾಡನ ಮಾಡಿ ಮೆಚ್ಚುಗೆ ಸೂಚಿಸಿದರು.


ತಾನು ಓದಿದ್ದಕ್ಕೂ ಮಾಡುತ್ತಿರುವ ಕೆಸಕ್ಕೂ ಸಂಬಂಧ ಇಲ್ಲದೇ ಇದ್ದರೂ ಯಶಸ್ವಿ ಉದ್ಯಮಿಯಾಗಲು ತಾವು ಅನುಸರಿಸುತ್ತಿರುವ ವ್ಯವಹಾರದಲ್ಲಿ ಸರಳತೆ ಮತ್ತು ಸಮರ್ಪಣೆ ಎಂಬ ಪರಿಕಲ್ಪನೆಗಳು ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ವ್ಯವಹಾರದಲ್ಲಿ ಒತ್ತಡ ಸಾಮಾನ್ಯ. ಇಂತಹ ಒತ್ತಡದಿಂದ ಹೊರಬರಲು ಆಧ್ಯಾತ್ಮ ಸಹಕಾರಿಯಾಗಿದೆ. ಅವಧೂತ ಶ್ರೀ ವಿನಯ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮ ದರ್ಶನ ಪಡೆದುಕೊಳ್ಳುತ್ತಿದ್ದು, ಗುರೂಜಿ ಅವರ ಸೇವಾ ಟ್ರಸ್ಟ್ನಿಂದ ಸೇವೆ ಮಾಡಿ ಸಂತೃಪ್ತಿ ಕಂಡುಕೊಳ್ಳುತ್ತಿರುವುದಾಗಿ ತಿಳಿಸಿದರು.
ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ, ಕೆ.ಪದ್ಮನಾಭ ಕಾಂಚನ್, ಹೆಚ್.ಡಿ.ವಿನಯ್, ಗುರುರಾಜ್ ಎಸ್.ಗಿರಿಮಾಜಿ, ಶ್ರೀನಾಥ್ ಗಿರಿಮಾಜಿ ಮತ್ತಿತರರು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!