ಶಿವಮೊಗ್ಗ:
ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತೀ ಲೀಟರ್ಗೆ ಕನಿಷ್ಟ 30 ರೂ.ಗೆ ಏರಿಸದಿದ್ದರೆ ಮಾ.23 ರಂದು ಕೆಎಂಎಫ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಹಾಲು ಉತ್ಪಾದಕರ ವೇದಿಕೆಯ ರಾಜ್ಯ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈಗಾಗಲೇ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ 2.50 ರೂ. ಏರಿಕೆ ಮಾಡಿರುವುದಾಗಿ ಘೋಷಿಸಲಾಗಿದೆ. ಇದು ಉತ್ಪಾದಕರಿಗೆ ಯಾವುದಕ್ಕೂ ಸಾಕಾಗುತ್ತಿಲ್ಲ. ಒಕ್ಕೂಟಗಳು ಲಾಭ ಮಾಡಿಕೊಳ್ಳುವುದರ ಜತೆಗೆ ದುಂದು ವೆಚ್ಚವನ್ನು ಮಾಡುತ್ತಿವೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಬೆಲೆ ನೀಡದೆ ವಂಚಿಸಲಾಗುತ್ತಿದೆ ಎಂದರು.ಕೊರೋನಾ ನೆಪ ಹೇಳಿ ಹಾಲು ಮಾರಾಟವಾಗುತ್ತಿಲ್ಲವೆಂದು ಖರೀದಿ ದರವನ್ನು ಕಡಿಮೆ ಮಾಡಲಾಗಿತ್ತು. ಆದರೆ ಉತ್ಪಾದಕರು ಈ ಸಂಬಂಧ ಯಾವುದೇ ಒತ್ತಡವನ್ನು ಒಕ್ಕೂಟಗಳ ಮೇಲೆ ಹೇರಿರಲಿಲ್ಲ. ನಷ್ಟವನ್ನು ಸಹಿಸಿಕೊಂಡು ಹಾಲು ಪೂರೈಸುತ್ತಿದ್ದರು. ಆದರೆ ಈಗ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಹಾಲಿನ ಉಪ ಉತ್ಪನ್ನಗಳಿಗೂ ಬೇಡಿಕೆ ಇದ್ದರೂ ಕೂಡ ಅದನ್ನು ಪರಿಗಣಿಸದೆ ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ ಎಂದರು.
ಉತ್ಪಾದಕರಿಂದ ಖರೀದಿಸುವ ಹಾಲಿಗೆ ವೈಜ್ಞಾನಿಕ ಹಾಗೂ ಏಕರೂಪದ ದರ ರಾಜ್ಯಾದ್ಯಂತ ನಿಗದಿ ಮಾಡಬೇಕು. ಆಹಾರ ಸುರಕ್ಷತಾ ಮಾನದಂಡ ಕಾಯಿದೆ ಅನ್ವಯ ಹಾಲು ಖರೀದಿಯ ಕನಿಷ್ಠ ಗುಣಮಟ್ಟ ಕಾಯಿದೆಯನ್ನಯ ತಕ್ಷಣ ಜಾರಿಗೊಳಿಸಿ 2017 ರಿಂದ ರಾಜ್ಯದ ಹಾಲು ಉತ್ಪಾದಕರಿಗೆ ಆಗಿರುವ ನಷ್ಟವನ್ನು ನೀಡುವಂತೆ ಆಗ್ರಹಿಸಿದರು.ಜಿಡ್ಡಿನಾಂಶ ಹಾಗೂ ಎಸ್ಎನ್ಎಫ್ ಆಧಾರದ ಮೇಲೆ ಉತ್ಪಾದಕರಿಗೆ ದರ ನೀಡುವ ವಿಧಾನವನ್ನು ಕೂಡಲೇ ಜಾರಿಗೊಳಿಸಬೇಕು. ಪಶು ಆಹಾರವನ್ನು ಶೇ.50 ರ ರಿಯಾಯಿತಿಯಲ್ಲಿ ಪೂರೈಸಬೇಕು. ಹಾಲು ಒಕ್ಕೂಟಗಳಲ್ಲಿ ನೇಮಕ ಮಾಡಿಕೊಳ್ಳುವಾಗ ಹಾಲು ಉತ್ಪಾದಕರ ಮಕ್ಕಳಿಗೆ ಶೇ. 50 ರಷ್ಟು ಸ್ಥಾನ ನೀಡುವಂತೆ ಒತ್ತಾಯಿಸಿದರು.
ಒಕ್ಕೂಟಗಳಲ್ಲಿ ಅನವಶ್ಯಕವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಕೊಳ್ಳುವುದನ್ನು ನಿಯಂತ್ರಿಸಬೇಕು. ಗುತ್ತಿಗೆ ಕಾರ್ಮಿಕರನ್ನು ಕಡಿಮೆ ಮಾಡಬೇಕು. ಸಂಘಗಳ ಸಿಬ್ಬಂದಿಗಳಿಗೆ ಪಿಎಫ್, ಗ್ರ್ಯಾಚುಟಿ, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದರು.ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, ಇವುಗಲ್ಲಿ 9 ಒಕ್ಕೂಟಗಳು ನಷ್ಟದಲ್ಲಿರುವುದಾಗಿ ತೋರಿಸಲಾಗಿದೆ. ಉಳಿದವು ಮಾತ್ರ ಲಾಭದಲ್ಲಿವೆ ಎಂದು ಹೇಳಲಾಗಿದೆ. ಎಲ್ಲಾ ಒಕ್ಕೂಟಗಳು ಮಾರ್ಚ್ ತಿಂಗಳಲ್ಲಿ ಮಾತ್ರ ಲಾಭದಲ್ಲಿವೆ ಎಂದು ತೋರಿಸಿ ಸರ್ಕಾರದಿಂದ ಬರುವ ಲಾಭ ಪಡೆಯಲು ಯತ್ನಿಸುತ್ತಿವೆ ಎಂದರು.
ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು 30 ರಿಂದ 40 ರೂ. ವೆಚ್ಚವಾಗುತ್ತದೆ. ಇದನ್ನು ಇದುವರೆಗೂ 22 ರೂ. ಗೆ ಇದುವರೆಗೆ ಮಾರಾಟ ಮಾಡಲಾಗುತಿತ್ತು. ಈಗ ಒಕ್ಕೂಟಗಳು ಕೇವಲ 2.50 ರೂ. ಮಾತ್ರ ಹೆಚ್ಚಳ ಮಾಡಿವೆ. ಇದು ತೀರಾ ಕಡಿಮೆಯಾಗಿರುವುದರಿಂದ ಕೂಲ ಪ್ರತೀ ಲೀಟರ್ಗೆ 30 ರೂ. ಹೆಚ್ಚಳ ಮಾಡ ಖರೀದಿಸುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಲ್. ಷಡಕ್ಷರಿ, ಜೈರಾಮ್ ಗೋಂದಿ, ಲೋಕೇಶ್ ಜಿ. ಕಲ್ಲುಕೊಪ್ಪ, ಶ್ರೀನಿವಾಸ್, ಗಜೇಂದ್ರ, ವೆಂಕಟೇಶ್, ಟಿ. ರಾಜಣ್ಣ ಮತ್ತಿತರರು ಇದ್ದರು.