ಶಂಕರಘಟ್ಟ: ಹತ್ತಕ್ಕೂ ಅಧಿಕ ರೀತಿಯ ತೆರಿಗೆಗಳಿದ್ದ ದಿನಗಳನ್ನು ಕೊನೆಗಾಣಿಸಿ ಏಕರೂಪದ, ಸರಳವಾದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ ಇದರ ಸಂಪೂರ್ಣ ಯಶಸ್ಸು ನಾಗರಿಕರ ಜಾಗೃತಿ ಮೇಲೆ ಅವಲಂಬಿತವಾಗಿದೆ ಎಂದು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ಡಾ. ಬಿ. ವಿ. ಮುರಳಿಕೃಷ್ಣ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ನಿರ್ವಹಣಾ ಶಾಸ್ತ್ರ ವಿಭಾಗವು ವಿವಿಯ ಬಸವ ಸಭಾಭವನದಲ್ಲಿ “ಭಾರತದಲ್ಲಿ ತೆರಿಗೆ ನೀತಿ ಮತ್ತು ವ್ಯವಹಾರಗಳು: ಜಿ.ಎಸ್.ಟಿ.” ಕುರಿತು ಆಯೋಜಿಸಿರುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಮತ್ತು ಕಸ್ಟಮ್ ತೆರಿಗೆಯೆಂಬ ಕೇವಲ ಎರಡು ತೆರಿಗೆಗಳಿವೆ. ಈ ಮೊದಲಿನ ವ್ಯಾಟ್ ಸೇರಿದಂತೆ ಹಲವು ಬಗೆಯ ತೆರಿಗೆಗಳನ್ನು ತೆಗೆದುಹಾಕಲಾಗಿದೆ. ವಾರ್ಷಿಕವಾಗಿ 40 ಲಕ್ಷಕ್ಕಿಂತ ಅಧಿಕ ವ್ಯವಹಾರ ನಡೆಸುವ ಸರಕು ವರ್ತಕರು ಮತ್ತು 20 ಲಕ್ಷಕ್ಕಿಂತ ಅಧಿಕ ವ್ಯವಹಾರ ನಡೆಸುವ ಸೇವೆ ನೀಡುವ ವರ್ತಕರು ಜಿ.ಎಸ್.ಟಿ.ಗೆ ನೊಂದಾಯಿಸಿಕೊಳ್ಳುವುದು ಕಡ್ಡಾಯ. ಈ ಸರಳ ತೆರಿಗೆ ವ್ಯವಸ್ಥೆಯನ್ನು ರೂಪಿಸುವ ಮತ್ತು ಜಾರಿಗೊಳಿಸುವ ಹಿಂದೆ 12 ವರ್ಷಗಳ ಶ್ರಮವಿದೆ ಎಂದರು.
ಗ್ರಾಹಕರಾದ ನಾವು ಯಾವುದೇ ವಸ್ತುವನ್ನು ಅಂಗಡಿಗಳಲ್ಲಿ ಕೊಂಡುಕೊಂಡಾಗ ರಶೀದಿ ಪಡೆಯಬೇಕು. ದೊಡ್ಡ ಅಂಗಡಿಗಳು, ಉದ್ಯಮಗಳ ಪ್ರತೀ ವ್ಯವಹಾರದ ಹಿಂದೆ ರಶೀದಿಯ ಅಗತ್ಯತೆಯಿರುತ್ತದೆ ಮತ್ತು ಆ ಮೂಲಕ ಸರ್ಕಾರಕ್ಕೆ ತೆರಿಗೆ ಸಲ್ಲಬೇಕಿರುತ್ತದೆ. ಜಾಗೃತತೆಯಿಂದ ರಶೀದಿಗಳನ್ನು ಪಡೆಯುವುದೇ ದೇಶದ ಬೆಳವಣಿಗೆಗೆ ನಾವು ನೀಡುವ ಕೊಡುಗೆಯಾಗಿರುತ್ತದೆ. ಕೊರೊನಾ ಸಂದರ್ಭದಲ್ಲಿಯೂ ಸಹ 1.31 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಜಿಎಸ್‌ಟಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಅವುಗಳ ಗುರುತಿಸುವಿಕೆ ಹಾಗೂ ಸರಿಪಡಿಸುವಿಕೆ ನಿರಂತರವಾಗಿ ಜಾರಿಯಲ್ಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಜಗತ್ತಿನಾದ್ಯಂತ 166 ದೇಶಗಳು ಈ ಮೊದಲೇ ಜಿಎಸ್‌ಟಿ ಅಳವಡಿಸಿಕೊಂಡಿವೆ. ಭಾರತವು ಒಂದು ವಿಶಿಷ್ಟ, ವೈವಿಧ್ಯಮಯ ದೇಶವಾದ ಕಾರಣ ಜಿಎಸ್‌ಟಿ ಜಾರಿ ತಡವಾಯಿತು. ನಾವು ಪ್ರಾಮಾಣಿಕವಾಗಿ ಬಿಲ್‌ಗಳನ್ನು ಪಡೆಯುವ ಮೂಲಕ ದೇಶದ ತೆರಿಗೆ ವ್ಯವಸ್ಥೆ ಪಾಲಿಸೋಣ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್, ನಿರ್ವಹಣಾ ವಿಭಾಗದ ಪ್ರೊ. ಹೆಚ್. ಎನ್. ರಮೇಶ್, ಪ್ರೊ. ಹಿರೇಮಣಿ ನಾಯ್ಕ್, ಪ್ರೊ. ವೆಂಕಟೇಶ್, ಡಾ. ಕೆ. ಆರ್. ಮಂಜುನಾಥ್, ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದ್ದು, ಶಿವಮೊಗ್ಗದ ಚಾರ್ಟೆಡ್ ಅಕೌಂಟೆಂಟ್ ಸಿ.ಎ. ಗೌರೀಶ್ ಭಾರ್ಗವ್, ಶಿವಮೊಗ್ಗದ ಆಡಿಟರ್ ಮತ್ತು ಟ್ಯಾಕ್ಸ್ ಕನ್ಸಲ್ಟೆಂಟ್ ಪರಮೇಶ್ವರ, ಶಿವಮೊಗ್ಗದ ವಾಣಿಜ್ಯ ತೆರಿಗೆಗಳ ಜಂಟಿ ನಿಯಂತ್ರಕ ಕೆ. ಮಂಜುನಾಥ ತೆರಿಗೆ ನೀತಿಗಳ ಕುರಿತು ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನೀಡಿದರು.