Special News

ಒಳ ಚರಂಡಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಭದ್ರಾವತಿ, ಮಾ.03:
ವಿಐಎಸ್‌ಎಲ್ ಕಾರ್ಖಾನೆಯ ತ್ಯಾಜ್ಯದಿಂದ ಕಪ್ಪು ನೀರಾಗಿ ಬದಲಾವಣೆಯಾಗಿದ್ದ ಭದ್ರಾ ನದಿಗೆ ಭದ್ರಾವತಿಯಿಂದ ತಟ್ಟಿದ್ದ ಶಾಪ ಪರಿಹಾರವಾಗಿದ್ದರು ಸಹ ಈಗ ಇಲ್ಲಿನ ಒಳ ಚರಂಡಿ ಉಪವಿಭಾಗದ ಅಧಿಕಾರಿಗಳ ತೀರಾ ನಿರ್ಲಕ್ಷ್ಯದಿಂದ ನಗರದ ಒಂದು ಕಡೆಯ ಕಲ್ಮಶ ಭದ್ರೆಯೊಳಗೆ ಬೆರೆಸುತ್ತಿರುವುದು ದುರಂತವೇ ಹೌದು.


ಇಂತಹದೊಂದು ಪೀಠಿಕೆಗೆ ಕಾರಣವಿಷ್ಟೆ. ಭದ್ರಾವತಿ ನಗರದ ಖಾಸಗಿ ಬಸ್‌ಸ್ಟ್ಯಾಂಡ್ ಬಳಿಯ ಇಂದಿರಾ ಕ್ಯಾಂಟಿನ್ ಮಗ್ಗುಲಲ್ಲೇ ಇರುವ ಯುಜಿಡಿ ಟ್ಯಾಂಕ್‌ನಲ್ಲಿ ಯಾವುದೇ ಸುರಕ್ಷತೆ, ಮುಂಜಾಗ್ರತೆ ಕ್ರಮಗಳಿಲ್ಲದೆ ಸುಮಾರು ೭-೮ ಕೂಲಿ ಕಾರ್ಮಿಕರನ್ನು ಬಳಸಿಕೊಂಡು, ಈ ಒಳ ಚರಂಡಿ ಉಪವಿಭಾಗದ ಅಧಿಕಾರಿಗಳು ಟ್ಯಾಂಕ್‌ನಲ್ಲಿದ್ದ ಕಲ್ಮಶವನ್ನು ನೇರವಾಗಿ ಭದ್ರೆಗೆ ಹಾಕುವ ಮೂಲಕ ಸಮಾಜಕ್ಕೆ ಮಾರಾಕವಾದ ಕೃತ್ಯ ಮಾಡಿದ್ದಾರೆ.
ಕಳೆದ 2 ದಿನದ ಹಿಂದೆ ಈ ಟ್ಯಾಂಕ್‌ನ ಸ್ವಚ್ಛತೆ ಉದ್ದೇಶದಿಂದ ಇಲ್ಲಿಯವರೆಗೂ ಭದ್ರಾವತಿ ನಗರಸಭೆಗೆ ಹಸ್ತಾಂತರವಾಗದಿರುವ ಒಳ ಚರಂಡಿ ಉಪವಿಭಾಗದ ಜವಾಬ್ದಾರಿಯಲ್ಲಿರುವ ಈ ಟ್ಯಾಂಕ್‌ನಿಂದ ಮಲೀನವನ್ನು ಇಬ್ಬರು ಕಾರ್ಮಿಕರು ಕೆಳಗಿಳಿದು ಬಕೆಟ್‌ನಲ್ಲಿ ತುಂಬಿ ಕೊಡುತ್ತಿದ್ದು, ಉಳಿದ ಕಾರ್ಮಿಕರು ಅದನ್ನು ಹೊರಗೆ ಚೆಲ್ಲುತ್ತಿದ್ದರು.


ಗ್ರೇಟ್ ಎನ್ನಬಹುದಾದ ನಗರಸಭೆ ಯಾರಾದರೂ ಕಸ ಹಾಕಿದರೆ ಒಂದು ಸಾವಿರ ದಂಡ ಹಾಕುತ್ತೇವೆ ಎಂದು ಎಲ್ಲೆಂದರಲ್ಲಿ ನಾಮಫಲಕವಾಕಿದೆ. ಇಲ್ಲಿ ಕಸ ಹಾಗೂ ಮಲೀನವನ್ನು ನೇರವಾಗಿ ಭದ್ರಾ ನದಿಗೆ ಹಾಕಿರುವ ಸಾಕ್ಷಿ, ಆಧಾರಗಳಿದ್ದರು ಸಹ ನಗರಸಭೆ ಕಣ್ಮುಚ್ಚಿ ಕುಳಿತಿರುವ ಉದ್ದೇಶವಾದರೂ ಏನು..?
ಭದ್ರೆಯಲ್ಲಿ ಜೀವಿಸುವ ಪ್ರಾಣಿಗಳು ಬದುಕುವುದಾದರೂ ಹೇಗೆ? ಈ ನೀರನ್ನು ಬಳಸುತ್ತಿರುವ ಮನುಷ್ಯರ ಕಥೆಯಾದರೂ ಏನು? ಪಶು ಪಕ್ಷಿಗಳ ಪರಿಸ್ಥಿತಿ ಏನು? ಭದ್ರೆಯ ಸರಹದ್ದಿನೊಳಗೆ ಗಲೀಜಿನ ಪ್ರಪಂಚವನ್ನು ಸೃಷ್ಠಿಸಿದ ಒಳಚರಂಡಿ ವಿಭಾಗದ ಇಂಜಿನಿಯರ್‌ಗಳಾದ ಮಿಥುನ್ ಕುಮಾರ್, ರಮೇಶ್ ಹಾಗೂ ಗುತ್ತಿಗೆದಾರರು ಮತ್ತು ಅವರ ಇಂಜಿನಿಯರ್‌ಗಳ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ.

ಈ ಸಂಬಂಧ ಭದ್ರೆಯೊಳಗೆ ಮಲೀನ ತುಂಬಿದ, ಕೂಲಿಕಾರ್ಮಿಕರನ್ನು ಮನುಷ್ಯತ್ವವಿಲ್ಲದೇ ಬಳಸಿಕೊಂಡ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಭದ್ರಾವತಿ ಜನತೆ ಆಗ್ರಹಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!