ಶಿವಮೊಗ್ಗ:
ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವಿದ್ದರೆ ಎಲ್ಲರೂ ಸಾಧನೆ ಮಾಡಬಹುದಾಗಿದೆ. ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಏಕಾಗ್ರತೆ ಹಾಗೂ ಛಲ ಮುಖ್ಯ ಎಂದು ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಡಾ. ಕಡಿದಾಳ್ ಗೋಪಾಲ್ ಅವರಿಗೆ ಅಭಿನಂದಿಸಿ ಮಾತನಾಡಿ, ಅಸಾಧ್ಯವಾದುದು ಯಾವುದು ಇಲ್ಲ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಗೋಪಾಲ್ ಅವರು 75ನೇ ವಯಸ್ಸಿನಲ್ಲಿ ಅಡಕೆ ವಿಷಯದಲ್ಲಿ ಸಮಗ್ರ ಅಧ್ಯಯನ ನಡೆಸಿ ಹಂಪಿ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಡಿ.ಲಿಟ್ ಪದವಿ ಪಡೆದಿರುವುದು ಅತ್ಯಂತ ಅಭಿನಂದನೀಯ ಎಂದು ತಿಳಿಸಿದರು.
ಕಡಿದಾಳ್ ಗೋಪಾಲ್ ಅವರು ಸಮಾಜಕ್ಕೆ ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. ಇವರು ಯುವಕರು ಸ್ಫೂರ್ತಿಯಾಗುವಂತೆ ಅಧ್ಯಯನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಯಾವುದೇ ವಯಸ್ಸಿನಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಗೋಪಾಲ್ ತೋರಿಸಿಕೊಟ್ಟಿದ್ದಾರೆ. ಯುವಜನರು ಇವರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದರು.
ಪ್ರತಿಯೊಬ್ಬರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಶಿಕ್ಷಣದಲ್ಲಿ ಹಂತ ಹಂತವಾಗಿ ಸಾಧನೆ ಮಾಡುವ ಬಗ್ಗೆ ಗಮನ ವಹಿಸಬೇಕು. ಯುವಜನರು ಹಿರಿಯರಿಂದ ಹಾಗೂ ಸಾಧಕರಿಂದ ಸೂಕ್ತ ಮಾರ್ಗದರ್ಶನ ಪಡೆದು ಉನ್ನತ ಸಾಧನೆ ಮಾಡಬೇಕು. ರಾಷ್ಟçದ ಪ್ರಗತಿಯಲ್ಲಿ ಯುವಜನರು ಕೈಜೋಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಡಾ. ಕಡಿದಾಳ್ ಗೋಪಾಲ್ ಮಾತನಾಡಿ, ನಾನು ಯಾವುದೇ ಹೆಸರಿಗಾಗಲೀ, ಪದವಿಗಾಗಲೀ ಈ ಗ್ರಂಥವನ್ನು ಬರೆದಿಲ್ಲ. ಅಡಕೆ ಬೆಳೆಯುವ ಪ್ರದೇಶದವರಿಗೆ ಮತ್ತು ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಮಾಹಿತಿ ತಲುಪಿಸುವ ಕಾರ್ಯ ಮಾಡಿದ್ದೇನೆ. ಎಲ್ಲ ವಿಷಯಗಳನ್ನು ಸ್ವತಂತ್ರವಾಗಿ ಅಧ್ಯಯನ ನಡೆಸಿ ದಾಖಲಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಉದ್ಯಮಿ ಜಯಣ್ಣ, ಆರ್.ಎಸ್.ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.