ಶಿವಮೊಗ್ಗ, ಫೆ.23:
ತೆರೆಮರೆಯಲ್ಲಿ ಕುಳಿತು ನಗರದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಸಮಾಜ ಘಾತುಕ ಶಕ್ತಿಗಳನ್ನು ಬುಡ ಸಮೇತ ಬಗ್ಗು ಬಡಿದು ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರದ ನೆರವಿನೊಂದಿಗೆ ಜಿಲ್ಲಾಡಳಿತವು ಸಕಲ ರೀತಿಯಲ್ಲೂ ಫೀಲ್ಡಿಗಿಳಿದಿದೆ.
ಇದೀಗ ಜಿಲ್ಲಾಡಳಿತವು ಡ್ರೋನ್ ಕಣ್ಗಾವಲು ಮೂಲಕ ಕ್ರಿಮಿನಲ್ಸ್ ಗಳನ್ನು ಪತ್ತೆ ಹಚ್ಚಿ, ನಗರದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಮುಂದಾಗಿದೆ. ಆ ಮೂಲಕ ಗಲಭೆ ಸೃಷ್ಟಿಸಲು ಮುಂದಾಗಿರು ವವರಿಗೆ ಖಡಕ್ ವಾರ್ನಿಂಗ್ ರವಾನಿಸಿದೆ.
ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲೇ ನಗರದಲ್ಲಿ ಶುರುವಾದ ಹಿಂಸಾಚಾರ ಹಾಗೂ ಗಲಭೆ ಯನ್ನು ಹತ್ತಿಕ್ಕಲು ಈಗಾಗಲೇ ಜಿಲ್ಲಾಡಳಿತವು ಸಿವಿಲ್ ಪೊಲೀಸ್ ಜತೆಗೆ ಕೆಎಸ್‌ಆರ್‌ಪಿ, ಡಿಎಆರ್, ಆರ್‌ಎಎಫ್ ತುಕುಡಿಗಳನ್ನು ಶಿವಮೊಗ್ಗ ನಗರಕ್ಕೆ ಕರೆಸಿಕೊಂಡಿದೆ. ರಕ್ಷಣಾ ಪಡೆಯ ಅಷ್ಟು ಸಿಬ್ಬಂದಿಯನ್ನು ಆಯಕಟ್ಟಿನ ಜಾಗಗಳಿಗೆ ನಿಯೋಜನೆ ಮಾಡಿ, ನಗರದಲ್ಲಿ ಶಾಂತಿ ಕಾಪಾಡಲು ಎಲ್ಲಾ ಕ್ರಮ ಕೈಗೊಂಡಿದೆ.
ಒಂದು ಹಂತಕ್ಕೆ ಜಿಲ್ಲಾಡಳಿತ ಯಶಸ್ವಿಯೂ ಕಂಡಿದೆ. ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತೆಯೇ ಇರುವ ಕಾರಣಕ್ಕೆ ಈಗ ತೆರೆ ಮರೆಯಲ್ಲಿ ಕುಳಿತು ಗಲಭೆ-ದೊಂಬಿಗೆ ಮುಂದಾಗುವ ಸಮಾಜ ಘಾತುಕ ಶಕ್ತಿಗಳನ್ನು ತಕ್ಷಣದಲ್ಲಿಯೇ ಪತ್ತೆ ಹಚ್ಚಲು ಡ್ರೋನ್ ಕಣ್ಗಾವಲು ಇರಿಸಿದೆ. ಇಡೀ ಶಿವಮೊಗ್ಗದ ನಗರದ ಮೇಲೆಯೇ ಈಗ ನಿಗಾ ಇರಿಸಲು ೭ ಡ್ರೋನ್ ಕ್ಯಾಮೆರಾ ಹೊಂದಿರುವ ನಾಲ್ಕು ತಜ್ಜರ ತಂಡ ನಗರಕ್ಕೆ ಕಾಲಿಟ್ಟಿದೆ.
ಎಎನ್ ಎಫ್ ಕಾರ್ಕಳ, ಕರಾವಳಿ ರಕ್ಷಣಾ ಪಡೆ, ಮಂಡ್ಯ ಹಾಗೂ ಉತ್ತರ ಕನ್ನಡದಿಂದ ಬಂದಿರುವ ನಾಲ್ಕು ತಂಡಗಳಲ್ಲಿ ಇಪ್ಪತ್ತಕ್ಕೂ ತಜ್ಜ ಪೊಲೀಸರು ಇದ್ದಾರೆ. ಇದಿಷ್ಟು ಸಿಬ್ಬಂದಿಯೂ ೭ ಡ್ರೋನ್ ಕ್ಯಾಮೆರಾಗಳು ಶಿವಮೊಗ್ಗ ನಗರದ ಮೇಲೆ ನಿಗಾ ವಹಿಸಲಿವೆ. ಯಾವುದೇ ಬೀದಿ, ರಸ್ತೆ ಅಥವಾ ಸಂದಿ-ಗೊಂದಿಗಳಲ್ಲಿ ಕುಳಿತು ಗಲಭೆಗೆ-ದೊಂಬಿಗೆ ಯಾರೇ ಸಿದ್ದತೆ ನಡೆಸಿದರೂ ಅದನ್ನು ಡ್ರೋನ್ ಕ್ಯಾಮೆರಾ ಪತ್ತೆ ಹಚ್ಚಲಿದೆ.
ಇದು ನಗರದ ರಕ್ಷಣೆಗೆ ಇನ್ನಷ್ಟು ಸಹಾಯಕವಾಗಲಿದೆ. ನಗರದ ಕೆಎಸ್‌ಆರ್ ಟಿ ಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದ ಬಳಿ ಬುಧವಾರ ಬೆಳಗ್ಗೆ ಈ ಡ್ರೋನ್ ಕ್ಯಾಮೆರಾಗಳ ಪ್ರಯೋಗಿಕ ಪರಿಶೀಲನೆ ನಡೆಯಿತು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಡ್ರೋನ್ ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಏನೆಲ್ಲ ತಂತ್ರಜ್ಜಾನ ಇದೆಯೋ ಅದೆಲ್ಲವನ್ನು ಬಳಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಸಹಾಯದೊಂದಿಗೆ ನಾವೀಗ ನಗರದಲ್ಲಿ ೭ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸುತ್ತಿದ್ದೇವೆ. ಇದರ ಫಲಿತಾಂಶ ಹೇಗಿರುತ್ತೆ, ಏನೆಲ್ಲ ಉಪಯೋಗಕ್ಕೆ ಬದಲಿದೆ ಎನ್ನುವುದು ಬಳಕೆ ಆದ ಮೇಲೆಯೇ ಗೊತ್ತಾಗಲಿದೆ ಎಂದರು.
ಸದ್ಯಕ್ಕೆ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆಗೆ ಜಾಗ ಫಿಕ್ಸ್ ಆಗಿಲ್ಲ. ಆದರೆ ಈಗಾಗಲೇ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ, ಹೆಚ್ಚಿನ ಪೊಲೀಸ್ ಬಂದೊಬಸ್ತ್ ಮಾಡಿರುವ ಪ್ರದೇಶಗಳ ಮೇಲೆಯೇ ಡ್ರೋನ್ ಕ್ಯಾಮೆರಾಗಳ ಕಾರ್ಯಾಚರಣೆ ಇರುವುದಂತೂ ಖಚಿತ.