ಶಿವಮೊಗ್ಗ : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿ., ನಿಂದ ಶಿವಮೊಗ್ಗ ನಗರದಲ್ಲಿ ಶೀಘ್ರದಲ್ಲೇ ಮಿನರಲ್ ವಾಟರ್ ಘಟಕವನ್ನು ಸ್ಥಾಪಿಸಲಾಗುವುದು ಎಂದು ಇದರ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದ ಶ್ರೀಗಂಧ ಕೋಟೆಯಲ್ಲಿ ಕೆಎಸ್‌ಡಿಎಲ್ ಸಂಸ್ಥೆಯ ಅಗರಬತ್ತಿ ಫ್ಯಾಕ್ಟರಿ ಕಾರ್ಯನಿರ್ವಹಿಸದೇ ಸ್ಥಗಿತವಾಗಿತ್ತು. ನಾನು ಅಧಿಕಾರ ವಹಿಸಿಕೊಂಡ ನಂತರ ಇಲ್ಲಿ ಅಗರಬತ್ತಿ ತಯಾರಿಕೆಯನ್ನು ಪುನಃ ಆರಂಭಿಸಿದ್ದೇನೆ. ಪಾಳು ಬಿದ್ದಂತಾಗಿದ್ದ ಈ ಜಾಗವನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ ೬೦ ಬಾಕ್ಸ್ ಅಗರಬತ್ತಿಗಳು ಉತ್ಪಾದನೆ ಮಾಡಲಾಗುತ್ತಿದೆ. ಸುಮಾರು ೪೦ ರಿಂದ ೫೦ ಜನರಿಗೆ ಉದ್ಯೋಗವನ್ನು ನೀಡಲಾಗಿದೆ. ಶೀಘ್ರದಲ್ಲೇ ನಮ್ಮ ಸಂಸ್ಥೆಯ ವತಿಯಿಂದ ಮಿನರಲ್ ವಾಟರ್ ಘಟಕವನ್ನು ಸ್ಥಾಪಿಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಕೆ.ಎಸ್.ಈಶ್ವರಪ್ಪ ನವರು ಮುಂದಿನ ದಿನಗಳಲ್ಲಿ ಕೇಸರಿ ಧ್ವಜವೇ ರಾಷ್ಟ್ರಧ್ವಜ ಆಗಬಹುದು ಎಂದು ಹೇಳಿದ್ದಾರೆ ಹೊರತು, ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಇದನ್ನೇ ಕಾಂಗ್ರೆಸ್‌ನವರು ನೆಪ ಮಾಡಿಕೊಂಡು ಸುಗಮವಾಗಿ ನಡೆಯುತ್ತಿದ್ದ ಕಲಾಪವನ್ನು ಹಾಳು ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಲು ಸದನವನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ನವರ ನಡೆ ಖಂಡನೀಯ.
-ಮಾಡಾಳು ವಿರೂಪಾಕ್ಷಪ್ಪ
ಶ್ರೀಗಂಧವನ್ನು ಬೆಳೆಯುವ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ೧ ಎಕರೆ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲು ಅವಕಾಶವಿದೆ. ಅದಕ್ಕಾಗಿ ನಮ್ಮ ಸಂಸ್ಥೆಯ ವತಿಯಿಂದ ಗನ್‌ಮ್ಯಾನ್‌ಗಳನ್ನೂ ಕೂಡಾ ನೀಡಲಾಗುವುದು. ಬ್ಯಾಂಕಿನ ನೆರವು ಪಡೆಯುವ ಮೂಲಕ ತಂತಿ ಬೇಲಿಯ ಸೌಲಭ್ಯವನ್ನು ಕಲ್ಪಿಸಲಾಗುವುದು. ೧ ಶ್ರೀಗಂಧದ ಮರ ೨೦ ವರ್ಷ ಬೆಳೆದಿದ್ದರೆ ಅದಕ್ಕೆ ೩ ಲಕ್ಷ ರೂ.ನಂತೆ ಹಣ ನೀಡಿ ಕೊಂಡುಕೊಳ್ಳಲಾಗುವುದು. ಇದರಿಂದ ರೈತರಿಗೆ ಆರ್ಥಿಕ ಲಾಭವಾಗಲಿದೆ. ಅಲ್ಲದೆ, ಹತ್ತು ವರ್ಷಗಳವರೆಗೆ ಈ ಬೆಳೆಯ ಮಧ್ಯೆಯೇ ಇತರೇ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದರು.
ನಮ್ಮ ಸಂಸ್ಥೆ ಪ್ರಸಕ್ತ ವರ್ಷ ೧೨೬ ಕೋಟಿ ರೂ. ಲಾಭ ಗಳಿಸಿದೆ. ಇದರಲ್ಲಿ ೨೨ ಕೋಟಿ ರೂ.ಗಳನ್ನು ಸರ್ಕಾರಕ್ಕೆ ಡಿವಿಡೆಂಟ್ ನೀಡಿದೆ. ಅಲ್ಲದೆ, ೩ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದ ಅವರು, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.