ಶಿವಮೊಗ್ಗ: ನಗರದ ಗೋಪಿ ವೃತ್ತದ ಬಳಿ ಮುಖ್ಯ ಅಂಚೆ ಕಚೇರಿಯ ಆವರಣದಲ್ಲಿರುವ ತೆಂಗಿನ ಮರಕ್ಕೆ ಶುಕ್ರವಾರ ಸಂಜೆ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ತೆಂಗಿನ ಮರಕ್ಕೆ ಬೆಂಕಿ ಬಿದ್ದಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತ್ತು. ಸಾಮಾನ್ಯವಾಗಿ ಮಳೆಗಾಲದಲ್ಲಿ ತೆಂಗಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದೀಗ ಸಿಡಿಲು ಬಡಿಯದೇ ಎತ್ತರದ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡಿತು.
ಬೆಂಕಿ ತಗುಲಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಪ್ರವೀಣ್ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.