ಶಿವಮೊಗ್ಗ, ಫೆ.01:
ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿಂದು ಹತ್ತರ ವಯಸ್ಕ ಸಿಂಹಿಣಿ ಮಾನ್ಯ ಸಾವು ಕಂಡಿದ್ದಾಳೆ.
ಗಂಡು ಸಿಂಹ ಯಶವಂತನ ಜೊತೆ ಪರಸ್ಪರ ಹೊಂದಾಣಿಕೆಗೆ ಬಿಟ್ಟಿದ್ದಾಗ ನಡೆದ ಸಂಘರ್ಷದಿಂದ ಲಯನ್ ಸಫಾರಿಯಲ್ಲಿದ್ದ ಮಾನ್ಯ ಎಂಬ ಸಿಂಹಿಣಿ ಅಸುನೀಗಿದ್ದಾಳೆ.
ಇದರಿಂದ ಶಿವಮೊಗ್ಗದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ 5 ಕ್ಕೆ ಕುಸಿದಿದೆ.
2011 ರಲ್ಲಿ ಮೈಸೂರು ಜ್ಯೂನಿಂದ ಬಂದ ಆರ್ಯ, ಮಾಲಿನಿ ಹಾಗೂ ಮಾನ್ಯರಲ್ಲಿ ಆರ್ಯ ಸಿಂಹವೊಂದನ್ನ ಹೊರತು ಪಡಿಸಿ ಎರಡು ಸಿಂಹಿಣಿಗಳು ಅಸುನೀಗಿವೆ. ಮೂರು ಗಂಡು, ಮೂರು ಹೆಣ್ಣು ಇದ್ದ ಸಫಾರಿಯಲ್ಲಿ ಮಾನ್ಯ ಅಸು ನೀಗಿದ ಹಿನ್ನಲೆಯಲ್ಲಿ ಸಿಂಹಗಳ ಸಂಖ್ಯೆ 5 ಕ್ಕೆ ಕುಸಿದಿದೆ.
ಒಂದು ವಾರದ ಹಿಂದೆ ಯಶವಂತ್ ಮತ್ತು ಮಾನ್ಯ ಜಗಳ ಆಡಿವೆ.ಈ ಬಗ್ಗೆ ಸ್ಪಷ್ಟನೆ ನೀಡಿದ ಲಯನ್ ಸಫಾರಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮುಕುಲ್ ಚಂದ್ ಈ ರೀತಿಯ ಜಗಳಗಳು ಸರ್ವೆ ಸಾಮಾನ್ಯ. ಆದರೆ ಹೀಗಾದಾಗ ಬೇರೆ ಬೇರೆ ಇಡಲಾಗುತ್ತದೆ.
ಹೀಗೆ ಪ್ರತ್ಯೇಕಿಸಿ ಇಡಲಾಗಿದ್ದರೂ ಸಹ ಮಾನ್ಯಗೆ ತೀವ್ರತರವಾದ ಗಾಯವಾಗಿದ್ದರಿಂದ ಗುಣಮುಖವಾಗದೆ ಇರುವ ಕಾರಣ ಮಾನ್ಯ ಅಸುನೀಗಿದ್ದಾಳೆ ಎಂದು ಮುಕುಲ್ ಚಂದ್ ಮಾಹಿತಿ ನೀಡಿದ್ದಾರೆ.
ಸಫಾರಿಯಲ್ಲಿ ನಿನ್ನೆ ಸರ್ಕಾರಿ ನಿಯಮಾವಳಿಗೆ ಅನುಗುಣವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿರುವ ಅವರು ಸಿಂಹಗಳನ್ನು ಗ್ರೂಪ್ ಮಾಡಲು ಹಾಗೂ ಅವಗಳನ್ನು ಒಂದು ಮಾಡಲು ಬಿಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಡೆದ ಘಟನೆ ಇದಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಾನ್ಯ ಅಸು ನೀಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.