ಶಿವಮೊಗ್ಗ, ಜ.೦೭:
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಹೆಚ್ಚಿದರೆ ಅದಕ್ಕೆ ಕಾರಣ ಬಿಜೆಪಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಇಂದಿಲ್ಲಿ ಆರೋಪಿಸಿದರು.
ಅವರು ಇಂದು ಮದ್ಯಾಹ್ನ ತುಂಗಾ ತರಂಗದೊಂದಿಗೆ ಮಾತನಾಡುತ್ತಾ, ಶಿವಮೊಗ್ಗ ನಗರದಲ್ಲಿ ನಿನ್ನೆಯಿಂದ ಕೊರೊನಾ ಹೆಚ್ಚುತ್ತಿದ್ದು, ಸರಿಯಾದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರಂತರವಾಗಿ ಕೊರೊನಾ ಮಹಾಮಾರಿ ಮಿತಿಮೀರಿದ ಸಂಖ್ಯೆಯಲ್ಲಿ ಹೆಚ್ಚುವುದು ಖಚಿತವೆಂದು ಹೇಳಿದರು.
ಕಳೆದ ೨ದಿನಗಳ ಹಿಂದೆ ಮುಂಜಾನೆ ಶಿವಮೊಗ್ಗ ನಗರಕ್ಕೆ ಬಂದ ಓಂ ಶಕ್ತಿ ಯಾತ್ರೆಯ ಜನರಿಗೆ ಆರೋಗ್ಯ ಇಲಾಖೆ ಕೇವಲ ನೆಪ ಮಾತ್ರ ಎಂಬಂತೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿದೆ.
ಅದರಿಂದ ಹೇಗೆ ತಾನೆ ಕೊರೊನಾ ಪತ್ತೆ ಹಚ್ಚಲು ಸಾಧ್ಯ. ತಮಿಳುನಾಡು ಮೂಲದಿಂದ ಬಂದವರನ್ನು ಇಲ್ಲಿನ ಆರೋಗ್ಯ ಇಲಾಖೆ ಉಡಾಫೆಯಾಗಿ ಪರಿಶೀಲನೆ ನಡೆಸಿ ಮನೆಯಲ್ಲಿ ಕ್ಯಾರಂಟೈನ್ ಮಾಡಲು ಸೂಚಿಸಿ ಕಳುಹಿಸಿದ್ದಾರೆ. ಓಂ ಶಕ್ತಿ ಯಾತ್ರೆಗೆ ಹೋಗಿದ್ದವರಲ್ಲಿ ಬಹುತೇಕ ಕಡೆ ಸ್ಲಂ ಏರಿಯಾದ ನಿವಾಸಿಗಳಿದ್ದಾರೆ. ಅವರು ಹೇಗೆ ಕ್ವಾರಂಟೈನ್ ಮಾಡಲು ಸಾಧ್ಯ ಎಂಬುವಂತೆ ಇಡೀ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲಾಗದ ಇಲಾಖೆಯ ಈ ವರ್ತನೆಗೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ಷೇಪಿಸಿದರು.
ಶಿವಮೊಗ್ಗ ಜಿಲ್ಲೆಯ ಆರೋಗ್ಯ, ರಕ್ಷಣೆ, ಸ್ವಚ್ಛತೆ ಹಾಗೂ ಆಡಳಿತದ ವ್ಯವಸ್ಥೆಯನ್ನು ನೋಡಿಕೊಳ್ಳಬಹುದಾದ ಸಚಿವರೇ ಈ ಬಗ್ಗೆ ನಿರ್ಲಕ್ಷಿಸಿದ್ದ ಹಿನ್ನೆಲೆಯಲ್ಲಿ ಈ ಕೊರೊನಾ ಮಹಾಮಾರಿ ವೇಗವಾಗಿ ಹರಡುವ ಶಿವಮೊಗ್ಗ ನಗರವನ್ನು ಆತಂಕಕ್ಕೆ ದೂಡುವ ಸಾಧ್ಯತೆಗಳಿವೆ.
ಅದಕ್ಕೆ ಸಚಿವರು ಬಿಜೆಪಿಯವರೇ ಕಾರಣವೆಂದು ಮತ್ತೊಮ್ಮೆ ಆಕ್ಷೇಪಿಸಿದರು.
ತಕ್ಷಣ ಆರೋಗ್ಯ ಇಲಾಖೆಯ ಎಲ್ಲರನ್ನು ಬಳಸಿಕೊಂಡು ಓಂ ಶಕ್ತಿ ಯಾತ್ರೆಗೆ ಹೋದ ಸರ್ವರನ್ನು ಸಂಪೂರ್ಣವಾಗಿ ಪರೀಕ್ಷಿಸಬೇಕು. ಎಲ್ಲರಿಗೂ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ನೀವೆ ಹೊಣೆಗಾರರಾಗುತ್ತೀರಿ ಎಂದು ಹೇಳಿದರು.