ಶಿವಮೊಗ್ಗ,ಜ.04:
ನಿರಂತರ ಜ್ಯೋತಿ ಯೋಜನೆಯಲ್ಲಿ ಸುಮಾರು 50 ಕೋಟಿ ರೂ. ಅವ್ಯವಹಾರವಾಗಿದ್ದು, ಅದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಬಹುಮುಖ್ಯವಾದ ಯೋಜನೆಯಾದ ನಿರಂತರ ಜ್ಯೋತಿ ಯೋಜನೆ ಜಿಲ್ಲೆಯಲ್ಲಿ ಸುಮಾರು 40 ರಿಂದ 50 ಕೋಟಿ ರೂ. ಅವ್ಯವಹಾರ ನಡೆದಿದೆ. ಭ್ರಷ್ಟಾಚಾರ ನಡೆದಿದೆ ಎಂದು ಸಚಿವರೇ ಹೇಳಿದ್ದಾರೆ. ಅವ್ಯವಹಾರವಾಗಿದ್ದನ್ನು ಅಧಿಕಾರಿಗಳ ಸಭೆಯಲ್ಲಿ ಸಚಿವರು ಗಮನಕ್ಕೆ ತಂದಿದ್ದು ಸರಿ ಮಾಡಿಕೊಳ್ಳಿ ಎಂದಿದ್ದಾರೆ. ಈ ಸರಿಮಾಡಿಕೊಳ್ಳಿ ಎಂಬುದರ ಅರ್ಥವೇನು ಎಂದು ಪ್ರಶ್ನಿಸಿದರು.
ಸರ್ಕಾರ ನಿರಂತರ ಜ್ಯೋತಿ ಯೋಜನೆಗಾಗಿ ಜಿಲ್ಲೆಗೆ 210 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಾಗಲೇ ಇದರಲ್ಲಿ 140 ಕೋಟಿ ರೂ. ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಇಂಧನ ಸಚಿವರು ಬಂದಾಗ 5 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಅವರೇ ಹೇಳಿದ್ದಾರೆ. ಅವರೂ ಕೂಡ ಸರಿ ಮಾಡಿಕೊಳ್ಳಿ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.


ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ಸಭೆಯಲ್ಲಿ 12.21 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಮಾತುಗಳು ಅಧಿಕಾರಿಗಳಿಂದಲೇ ಕೇಳಿಬಂದಿದ್ದವು. ಕಂಬಗಳ ಅಳವಡಿಕೆಯಲ್ಲಿ ಬಹುದೊಡ್ಡ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆದಿದೆ. ಒಟ್ಟಾರೆ, ಸುಮಾರು 50 ಹಗರಣವಾದ ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಸಿಬಿಐಗೆ ನೀಡಬೇಕು. ಇಲ್ಲದಿದ್ದರೆ ಈ ಆರೋಪಗಳು ಅವರನ್ನು ಸುತ್ತಿಕೊಳ್ಳುತ್ತವೆ ಎಂದರು.


ಇದಲ್ಲದೇ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೂಡ ಭ್ರಷ್ಟಾಚಾರ ನಡೆದಿದೆ. ಕೇಬಲ್ ಅಳವಡಿಕೆಯಲ್ಲಿ 105 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದು ಕೂಡ ತನಿಖೆಯಾಗಬೇಕು. ದೇವಕಾತಿಕೊಪ್ಪದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸಬ್ ಸ್ಟೇಷನ್ ಕೂಡ ಅವೈಜ್ಞಾನಿಕವಾದ ರೀತಿಯಲ್ಲಿ ಅಳವಡಿಸಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಶ್ಯಾಂಸುಂದರ್, ಎಸ್.ಟಿ. ಹಾಲಪ್ಪ, ಶಿವಾನಂದ್, ದೀಪಕ್ ಸಿಂಗ್, ಶಿವಣ್ಣ, ಬಾಬು ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!