ಶಿವಮೊಗ್ಗ, ಡಿ.೩೧:
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಇಂದು ರಾತ್ರಿ ೧೦ ಗಂಟೆ ನಂತರ ಯಾವುದೇ ಸಂಭ್ರಮಾಚರಣೆಗೆ ಸಾರ್ವಜನಿಕವಾಗಿ ಆಚರಿಸಲು ನೈಟ್ ಕರ್ಫ್ಯೂ ಇರುವುದರಿಂದ ಅವಕಾಶ ಇಲ್ಲ. ಬಾರ್, ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳು ೧೦ ಗಂಟೆಯೊಳಗೆ ವ್ಯವಹಾರ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಜೆ ೭.೩೦ ಕ್ಕೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು. ರಾತ್ರಿ ೯.೩೦ ಕ್ಕೆ ವ್ಯಾಪಾರ ಸ್ಥಗಿತಗೊಳಿಸಲು ಸೂಚಿಸಲಾಗುವುದು. ೧೦ ಗಂಟೆಯೊಳಗೆ ಜನ ಮನೆ ಸೇರಿಕೊಳ್ಳಬೇಕು. ಅನವಶ್ಯಕ ಓಡಾಟಕ್ಕೆ ಸಂಪೂರ್ಣ ನಿರ್ಬಂಧವಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಕಟ್ಟುನಿಟ್ಟಿನ ತಪಾಸಣೆ, ಪರಿಶೀಲನೆ ನಡೆಸಲಾಗುವುದು ಎಂದರು.

ನಿಯಮ ಉಲ್ಲಂಘಿಸಿ ಅನವಶ್ಯಕವಾಗಿ ಓಡಾಡುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ಸಂಚರಿಸುವುದನ್ನು ನಿಷೇಧಿಸಲಾಗಿದೆ. ಅಗತ್ಯಸೇವೆಗೆ ಪಾಸ್ ಪಡೆದು ರಾತ್ರಿ ವೇಳೆ ಸಂಚರಿಸಬಹುದು. ದಾಖಲೆ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಜಾಸ್ತಿಯಾಗಿದೆ. ಪ್ರಕರಣದ ತನಿಖೆಗೆ ಕೇರಳಕ್ಕೆ ಹೋಗಿಬಂದಿದ್ದ ತೀರ್ಥಹಳ್ಳಿ ತನಿಖಾಧಿಕಾರಿ ಓರ್ವರಿಗೆ ಕೊರೋನಾ ದೃಢಪಟ್ಟಿದೆ ಎಂದರು.
ಸಾರ್ವಜನಿಕರು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.
ಶಿವಮೊಗ್ಗ, ಡಿ.೩೧:
ಕೊರೋನಾ ಮೂರನೇ ಅಲೆಯ ಭೀತಿಯ ನಡುವೆ ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧದ ನಡುವೆಯೂ ಹೊಸ ವರ್ಷ ೨೦೨೨ ರ ಸಂಭ್ರ ಮಕ್ಕೆ ನಗರದ ಹೋಟೆಲ್, ಬಾರ್, ರೆಸ್ಟೋ ರೆಂಟ್, ಬೇಕರಿಗಳು ಸರ್ವ ಸಿದ್ಧತೆ ಮಾಡಿ ಕೊಂಡಿವೆ. ಗ್ರಾಹಕರನ್ನು ಸೆಳೆಯಲು ಅನೇಕ ಕೊಡುಗೆ ನೀಡಿವೆ.
ಕೋವಿಡ್ -೧೯ ರಿಂದ ಕಳೆದೆರಡು ವರ್ಷ ಗಳಲ್ಲಿ ಅಪಾರ ನಷ್ಟ ಅನುಭವಿಸಿದ ಆಹಾರೋ ದ್ಯಮ ಸೇರಿದಂತೆ ಎಲ್ಲಾ ಉದ್ಯಮಗಳು ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಾಗ ಕೊರೋನಾ ರೂಪಾಂತರಿ ಒಮಿಕ್ರಾನ್, ಮೂರನೇ ಅಲೆ ಆತಂಕ ಎದುರಾಗಿದೆ.
ನಿರ್ಬಂಧಗಳ ನಡುವೆ ಜನರು ಹೊಸ ವರ್ಷ ವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರ್ವಜನಿಕವಾಗಿ ಆಚರಣೆಗೆ ಅವಕಾಶವಿಲ್ಲದ ಕಾರಣ ಪಾರ್ಸೆಲ್ ತೆಗೆದುಕೊಂಡು ಮನೆ, ಇಲ್ಲವೇ ರೂಮ್ ಗಳಲ್ಲಿ ಹೊಸ ವರ್ಷಾಚರಣೆಗೆ ರೆಡಿ ಮಾಡಿಕೊಂಡಿದ್ದಾರೆ.
ಆದರೆ ಹೊಸ ವರ್ಷದ ಸಂಭ್ರಮ ರಾತ್ರಿ ೧೦ ಗಂಟೆಯ ತನಕ ಮಾತ್ರ. ನಿಯಮಾವಳಿ ಮೀರಿದಲ್ಲಿ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ರಸ್ತೆಗಳಲ್ಲಿ ಕೂಗಾಡುವುದು, ಕೇಕೆ ಹಾಕುವುದು, ಪಟಾಕಿ ಸಿಡಿಸುವುದು, ಮದ್ಯಪಾನ ಮಾಡಿ ಅನಾವಶ್ಯಕವಾಗಿ ಓಡಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.
೧೦ ಗಂಟೆಗೆ ನೈಟ್ ಕರ್ಫ್ಯೂ ಇರುವುದರಿಂದ ಅಷ್ಟರೊಳಗೆ ಸಾರ್ವಜನಿಕರು ಮನೆ ಸೇರಿಕೊಳ್ಳಬೇಕಿದೆ. ನಿರ್ಬಂಧಗಳ ನಡುವೆ ಹೊಸ ವರ್ಷಾಚರಣೆಗೆ ಹೋಟೆಲ್, ರೆಸ್ಟೊರೆಂಟ್, ರೆಸಾರ್ಟ್ ಗಳಲ್ಲಿ ಶೇ. ೫೦ ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಹೋಟೆಲ್ ಮಾಲೀ ಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಇಂತಹ ಅವೈಜ್ಞಾನಿಕ ನಿರ್ಧಾರಗಳಿಂದ ಮೊದಲೇ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮಕ್ಕೆ ಬರೆ ಎಳೆದಂತಾಗಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಇನ್ನು ಯುವಕರು ಸೇರಿದಂತೆ ಕೆಲವರು ತೋಟದ ಮನೆ ಸೇರಿ ಹೊರ ವಲಯಗಳಲ್ಲಿ ಹೊಸ ವರ್ಷವನ್ನು ಆಚರಿಸಲು ಪ್ಲಾನ್ ಮಾಡಿ ಕೊಂಡಿದ್ದಾರೆ.
ಬೇಕರಿಗಳಲ್ಲಿ ಕೇಕ್ ಸೇರಿದಂತೆ ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿದ್ದು, ಹೆಚ್ಚಿನವರು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ನಾನ್ ವೆಜ್ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಆರ್ಡರ್ ನೀಡಲಾಗಿದೆ.

